ಟೆನ್ನಿಸ್ ಪ್ರಿಯರಿಗೆ ಕಹಿ ಸುದ್ದಿ: ಮೊಣಕಾಲಿನ ಗಾಯದಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕೂಟದಿಂದ ಹಿಂದೆ ಸರಿದ ರೋಜರ್ ಫೆಡರರ್

 ಟೆನ್ನಿಸ್ ಪ್ರಿಯರಿಗೆ ಕಹಿ ಸುದ್ದಿ: ಮೊಣಕಾಲಿನ ಗಾಯದಿಂದಾಗಿ ಟೋಕಿಯೋ ಒಲಿಂಪಿಕ್ಸ್ ಕೂಟದಿಂದ ಹಿಂದೆ ಸರಿದ ರೋಜರ್ ಫೆಡರರ್

ನವದೆಹಲಿ: ಟೆನ್ನಿಸ್ ಪ್ರಿಯರಿಗೆ ಕಹಿ ಸುದ್ದಿಯೊಂದು ಎದುರಾಗಿದ್ದು ಬಹು ನಿರೀಕ್ಷಿತ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಸ್ವಿಸ್ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಹಿಂದೆ ಸರಿದಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಸ್ವಿಸ್ ಮೇಸ್ಟ್ರೋ, 2 ಬಾರಿ ಒಲಿಂಪಿಕ್ಸ್ ಪದಕ ವಿಜೇತ ರೋಜರ್ ಫೆಡರರ್ ಟೋಕಿಯೊ ಒಲಿಂಪಿಕ್ಸ್ʼನಿಂದ ಹಿಂದೆ ಸರಿಯುವ ನಿರ್ಧಾರವನ್ನ ಮಂಗಳವಾರ ಘೋಷಿಸಿದ್ದಾರೆ. ತಾವು ಮೊಣಕಾಲು ನೋವಿನಿಂದ ಬಳಲುತ್ತಿರುವುದಾಗಿ ಅವರು ಹೇಳಿದ್ದು, ಇದೇ ಕಾರಣದಿಂದ ತಾವು ಒಲಿಂಪಿಕ್ಸ್ ಟೂರ್ನಿಯಿಂದ ಹಿಂದೆ  ಸರಿಯುತ್ತಿರುವುದಾಗಿ ಹೇಳಿದ್ದಾರೆ.

20 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಫೆಡರರ್ ಈ ವರ್ಷದ ಆರಂಭದಲ್ಲಿ ಅನೇಕ ಮೊಣಕಾಲು ಶಸ್ತ್ರಚಿಕಿತ್ಸೆಗಳಿಂದಾಗಿ 2020ರ ಬಹುತೇಕ ಟೂರ್ನಿಗಳಲ್ಲಿ ಪಾಲ್ಗೊಳ್ಳುವುದರಿಂದ ವಂಚಿತರಾಗಿದ್ದರು. ಇತ್ತೀಚೆಗಷ್ಟೇ ಟೆನ್ನಿಸ್ ಗೆ ಮರಳಿದ್ದ ಅವರು ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿ ಮಹತ್ವದ  ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ. 

ಮಾರ್ಚ್ ನಲ್ಲಿ ದೋಹಾ ಓಪನ್ ನಲ್ಲಿ ಟೆನ್ನಿಸ್ ಗೆ ಮರಳಿದ್ದ ಅವರು, 2ನೇ ಸುತ್ತಿನಲ್ಲಿ ನಾಕ್ ಔಟ್ ಆಗಿದ್ದರು. ನಂತರ ಜಿನೀವಾ ಓಪನ್ ನಲ್ಲಿ ಮೊದಲ ಸುತ್ತಿನಲ್ಲೇ ಸೋಲನ್ನ ಅನುಭವಿಸಿ ಟೂರ್ನಿಯಿಂದ ಹೊರಬಿದ್ದಿದ್ದರು.