ಹೋರಾಟಕ್ಕೆ ಮಣಿದು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದ ಕೇಂದ್ರ: ತಿಪಟೂರಿನಲ್ಲಿ ರೈತ ಸಂಘಟನೆಗಳಿಂದ ಸಂಭ್ರಮಾಚರಣೆ

ತುಮಕೂರು: ರೈತ ಚಳುವಳಿಗೆ ಮಣಿದು, ಕ್ಷಮೆ ಕೋರಿ ಕೃಷಿ ಕಾಯ್ದೆಗಳನ್ನು ಹಿಂಪಡೆದ ಮೋದಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ರೈತ ಸಂಘಟನೆಗಳು ವಿವಿಧೆಡೆ ಸಂಭ್ರಮಾಚರಣೆ ನಡೆಸಿದವು. ತಿಪಟೂರು ನಗರದ ನಗರಸಭಾ ಕಚೇರಿ ಮುಂಭಾಗ ಸೇರಿದ ಪ್ರಗತಿಪರ ರೈತ ಸಂಘಟನೆಗಳ ನಾಯಕರು, ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಿದರು.
ಈ ವೇಳೆ ಮಾತನಾಡಿದ ರೈತ-ಕೃಷಿ ಕಾರ್ಮಿಕ ಸಂಘಟನೆ(ಆರ್.ಕೆ.ಎಸ್) ಜಿಲ್ಲಾ ಸಂಚಾಲಕರಾದ ಎಸ್.ಎನ್ ಸ್ವಾಮಿ, ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಪ್ರಧಾನ ಮಂತ್ರಿಗಳು ಘೋಷಣೆ ಮಾಡಿದ್ದಾರೆ. ಇದು ರೈತ ಚಳುವಳಿಯಲ್ಲೇ ಚಾರಿತ್ರಿಕ ವಿಜಯ ಎಂದು ಹೇಳಿದರು. ಇದು ನಮ್ಮ ರಾಜ್ಯದಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ ಹಾಗೂ ಅಖಿಲ ಭಾರತ ಮಟ್ಟದಲ್ಲಿ ಕೂಡ ಮುಖ್ಯ ಭಾಗವಾಗಿರುವ ಎಸ್.ಕೆ.ಎಂ ಪತಾಕೆಯಡಿ ನಡೆದ ರೈತ ಚಳುವಳಿಯ, ಈ ವಿಜಯಕ್ಕೆ ವಿಶ್ವವ್ಯಾಪಿ ಮಹತ್ವವಿದೆ. ಇದು 700 ಹುತಾತ್ಮ ರೈತರ ಜೀವ ಕೊಟ್ಟು ರೈತರು ಗಳಿಸಿದ ವಿಜಯ; ಅವರ ಪರಿಶ್ರಮದಾಯಕ ಹೋರಾಟಗಳಿಂದ, ಬಲಿದಾನಗಳಿಂದ ಗಳಿಸಿದ ವಿಜಯ ಎಂದು ಬಣ್ಣಿಸಿದರು.
ಇನ್ನೂ ಕೇಂದ್ರ ಸರ್ಕಾರ ವಿದ್ಯುತ್ ಮಸೂದೆ ವಾಪಸ್ ತೆಗೆದುಕೊಂಡಿಲ್ಲ. ಉತ್ಪಾದನಾ ವೆಚ್ಚದ ಮೇಲೆ ಶೇ. 50ರಷ್ಟು ಹೆಚ್ಚಿರುವ ಕನಿಷ್ಠ ಬೆಂಬಲ ಬೆಲೆಯಲ್ಲಿ ಎಲ್ಲಾ ಬೆಳೆಗಳನ್ನು ಖರೀದಿಸುವುದನ್ನು ಖಚಿತಪಡಿಸುತ್ತವೆ ಎಂದು ಘೋಷಿಸಿಲ್ಲ. ಹೀಗಾಗಿ ಎಂಎಸ್ಪಿಗೆ ಕಾನೂನು ಮಾನ್ಯತೆ ಸಿಗುವವರೆಗೂ ರೈತರ ಹೋರಾಟ ನಿಲ್ಲುವುದಿಲ್ಲ ಎಂದು ಎಸ್.ಎನ್ ಸ್ವಾಮಿ ಎಚ್ಚರಿಸಿದರು.

ಸಿಹಿ ಹಂಚಿ ಸಂಭ್ರಮಿಸುತ್ತಿರುವ ರೈತರು
ಇದೇ ವೇಳೆ ಕೇಂದ್ರ ಸರ್ಕಾರ ದೇಶದ ಎಲ್ಲೆಡೆ ರೈತರ ಮೇಲೆ ಹಾಕಿರುವ ಮೊಕದ್ದಮೆಗಳನ್ನು ವಾಪಸ್ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದರು. ರೈತರ ಚಳುವಳಿಯ ಮೇಲೆ ದಾಳಿ ಮಾಡಿದವರಿಗೆ ಶಿಕ್ಷೆಯಾಗಿಲ್ಲ ಎಂದು ದೂರಿದ ಅವರು, ಹೋರಾಟದಲ್ಲಿ ಹುತಾತ್ಮ ರೈತರ ಕುಟುಂಬಗಳ ಜವಾಬ್ದಾರಿಯನ್ನು ಮೋದಿ ಸರ್ಕಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಇದಕ್ಕೂ ಮೊದಲು ರೈತರ ಹೋರಾಟದಲ್ಲಿ ಹುತಾತ್ಮ ರೈತರಿಗೆ ಸಂಘಟನೆಗಳಿಂದ ಶ್ರದ್ದಾಂಜಲಿ ಸೂಚಿಸಲಾಯಿತು. ನಿರಂತರ ಹೋರಾಟಕ್ಕೆ ಬೆಂಬಲವಾಗಿ ನಿಂತ ರೈತ, ಕಾರ್ಮಿಕರು, ಮಹಿಳೆಯರು, ಯುವಜನರು, ವಿದ್ಯಾರ್ಥಿಗಳು, ಸುಚಿಂತಕರು ಹಾಗೂ ಎಲ್ಲಾ ನಾಗರಿಕರಿಗೂ ಸಂಘಟನೆ ನಾಯಕರು ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಿಮ್ಮಾಪುರ ದೇವರಾಜ್, ಬಸ್ತೀಹಳ್ಳಿ ರಾಜಣ್ಣ, ಹಿರಿಯ ರೈತ ಮುಖಂಡರಾದ ಯೋಗಾನಂದ ಸ್ವಾಮಿ, ಬೆಲೆ ಕಾವಲು ಸಮಿತಿಯ ಶ್ರೀಕಾಂತ್, ಮನೋಹರ್ ಪಟೇಲ್, ಜನಸ್ಪಂದನ ಟ್ರಸ್ಟ್ ನ ಸಿ ಬಿ ಶಶಿಧರ್, ಆರ್.ಕೆ.ಎಸ್.ನ ತಾಲೂಕಿನ ಸಹ ಸಂಚಾಲಕ ಸಚಿನ್ ಬೊಮ್ಮಲಪುರ, ಹಾಲ್ಕುರಿಕೆ ವಿಜಯ್, ನಾಗರಾಜ್, ಭೈರನಾಯ್ಕನಹಳ್ಳಿ ಸಂಜಯ್, ರಂಗಧಾಮಯ್ಯ, ಮಾಯಗೋಂಡನಹಳ್ಳಿ ಪರಮೇಶ್ ಹಾಜರಿದ್ದರು.
#modi#rks#raita sangha #agriculture act