ಹೋಟೆಲ್ ಗೆ ಹೋಗುವ ಮುನ್ನ ಜೇಬು ನೋಡಿಕೊಳ್ಳಿ: ನಾಳೆಯಿಂದ ಹೋಟೆಲ್ ಊಟ ದುಬಾರಿ

ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಹೋಟೆಲ್ ಮಾಲೀಕರು ಮತ್ತೊಂದು ಶಾಕ್ ನೀಡುತ್ತಿದ್ದಾರೆ. ನೀವು ಇನ್ನು ಮೇಲೆ ಹೋಟೆಲ್ಗೆ ಹೋಗಬೇಕಾದರೆ ನಿಮ್ಮ ಜೇಬು ನೋಡಿಕೊಳ್ಳಬೇಕಿದೆ. ಇನ್ಮುಂದೆ ಹೋಟೆಲ್ ನಲ್ಲಿ ತಿನ್ನುವ ಇಡ್ಲಿ–ದೋಸೆ, ಕಾಫಿ ಸೇರಿದಂತೆ ತಿಂಡಿ, ಊಟದ ದರ ಏರಿಕೆಯಾಗಲಿದೆ.
ನಾಳೆಯಿಂದಲೇ ಹೋಟೆಲ್ ತಿನಿಸುಗಳ ಮೇಲೆ ಹೊಸ ದರ ಜಾರಿಯಾಗಲಿದೆ. ಕೆಲವು ಹೋಟೆಲ್ ಗಳು ನ.15ರ ನಂತರ ದರ ಏರಿಕೆಗೆ ನಿರ್ಧರಿಸಿದೆ. ಆಯಾ ಹೋಟೆಲ್ ಮಾಲೀಕರು ದರ ಏರಿಕೆಯನ್ನು ನಿಗದಿಪಡಿಸಿದ್ದಾರೆ. ಎಲ್ಲ ತಿಂಡಿ, ತಿನಿಸು, ಊಟದ ಮೇಲೆ ಶೇ.10 ರಿಂದ 20ರಷ್ಟು ದರ ಏರಿಕೆಗೆ ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಹೋಟೆಲ್ ಆಹಾರ ಬೆಲೆ ಏರಿಕೆ ರಾಜ್ಯಾದ್ಯಂತ ಅನ್ವಯವಾಗಲಿದೆ.
ಇತ್ತೀಚೆಗೆ ತರಕಾರಿ, ದವಸ–ಧಾನ್ಯಗಳ ಬೆಲೆ ಏರಿಕೆಯಾಗಿದೆ. ಹೋಟೆಲ್ ಗಳಲ್ಲಿ ಬಳಸುವ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ದರ ಭಾರಿ ಏರಿಕೆಯಾಗಿದೆ. ಹೀಗಾಗಿ ಹೋಟೆಲ್ ಆಹಾರ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಮಾಹಿತಿ ನೀಡಿದ್ದಾರೆ.
ಹೋಟೆಲ್ ಆಹಾರ ಬೆಲೆ ಏರಿಕೆ ಜನಸಾಮಾನ್ಯರಿಗೆ ಹೊರೆಯಾಗಲಿದೆ. ಆನ್ ಲೈನ್ ಮೂಲಕ ಫುಡ್ ಆರ್ಡರ್ ಮೇಲೆಯೂ ದರ ಏರಿಕೆ ಪರಿಣಾಮ ಬೀರಲಿದ್ದು, ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಮತ್ತಷ್ಟ ಹೊರೆ ಬೀಳಲಿದೆ.