`ಹೆಡ್ ಬುಷ್’ ಫಸ್ಟ್ ಲುಕ್ ರಿಲೀಸ್ ; ಡಾನ್ ಜಯರಾಜ್ ಗೆಟಪ್ಪಿನಲ್ಲಿ ಡಾಲಿ ಧನಂಜಯ್

ಬೆಂಗಳೂರು: ಡಾನ್ ಜಯರಾಜ್ ಜೀವನ ಆಧಾರಿತ ಡಾಲಿ ಧನಂಜಯ್ ನಟಿಸಿರುವ ‘ಹೆಡ್ ಬುಷ್’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಬೆಂಗಳೂರಿನ ಭೂಗತ ಲೋಕದಲ್ಲಿ ಡಾನ್ ಆಗಿದ್ದ ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ಅಭಿನಯಿಸಲಿದ್ದಾರೆ. ಟೀಸರ್ ನಲ್ಲಿ ಡಾಲಿ ಪಕ್ಕಾ ರೌಡಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಜಯರಾಜ್ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಅಗ್ನಿ ಶ್ರೀಧರ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆಯುತ್ತಿದ್ದು, ಶೂನ್ಯ ಎಂಬ ಹೊಸ ಪ್ರತಿಭೆ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಈ ಚಿತ್ರದಲ್ಲಿ ಬಾಲಿವುಡ್ ನಟಿ ಪಾಯಲ್ ರಜಪೂತ್ ಅವರು ಧನಂಜಯ್ ಅವರಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗಿನ ಆರ್.ಎಕ್ಸ್ 100, ವೆಂಕಿ ಮಾಮ, ಸೇರಿದಂತೆ ಕೆಲ ಚಿತ್ರಗಳಲ್ಲಿ ಪಾಯಲ್ ರಜಪೂತ್ ನಟಿಸಿದ್ದಾರೆ. ಆಗಸ್ಟ್ 9 ರಿಂದ ‘ಹೆಡ್ ಬುಷ್’ ಚಿತ್ರದ ಚಿತ್ರೀಕರಣ ಶುರುವಾಗಿದ್ದು, ಬೆಂಗಳೂರಿನಲ್ಲಿಯೇ ಈ ಚಿತ್ರದ ಮೊದಲ ಹಂತದ ಶೂಟಿಂಗ್ ನಡೆಯಲಿದೆ. ಹೆಡ್ ಬುಷ್ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾ ಆಗಲಿದ್ದು, ಎರಡು ಭಾಗಗಳಲ್ಲಿ ತಯಾರಾಗಲಿದೆ.