ಹಾನಗಲ್ನಲ್ಲಿ ಕಾಂಗ್ರೆಸ್, ಸಿಂದಗಿಯಲ್ಲಿ ಬಿಜೆಪಿಗೆ ಗೆಲುವು; ಉಪಸಮರದಲ್ಲಿ ಜೆಡಿಎಸ್ಗೆ ಭಾರಿ ನಿರಾಸೆ

 ಹಾನಗಲ್ನಲ್ಲಿ ಕಾಂಗ್ರೆಸ್, ಸಿಂದಗಿಯಲ್ಲಿ ಬಿಜೆಪಿಗೆ ಗೆಲುವು; ಉಪಸಮರದಲ್ಲಿ ಜೆಡಿಎಸ್ಗೆ ಭಾರಿ ನಿರಾಸೆ

ಬೆಂಗಳೂರು; ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಎರಡು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ 7426 ಮತ್ತು ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 31,088 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಸೋತು ಭಾರಿ ಹಿನ್ನಡೆ ಅನುಭವಿಸಿದೆ. ಸಿಎಂ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆಯಾದ

ಹಾವೇರಿಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಮತ ಎಣಿಕೆ ಇಂದು ನಡೀಯಿತು. ಬೆಳಗ್ಗೆ 8 ಗಂಟೆಗೆ ಆರಂಭವಾದ ಮತ ಎಣಿಕೆ ವೇಳೆ ಹಾನಗಲ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಎದುರಾಯಿತು. ಆದರೆ ಸಿಂದಗಿಯಲ್ಲಿ ಬಿಜೆಪಿಯ ರಮೇಶ್ ಭೂಸನೂರ ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡು 31,088 ಮತಗಳ ಅಂತರದಲ್ಲಿ ಗೆದ್ದರು.

ಹಾನಗಲ್‌ನಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಮತ್ತು ಬಿಜೆಪಿಯ ಶಿವರಾಜ ಸಜ್ಜನರ ನಡುವೆ ಪ್ರಬಲ ಪೈಪೋಟಿ ನಡೆಯಿತು. ಅಂತಿಮವಾಗಿ ಕಾಂಗ್ರೆಸ್ ನ ಶ್ರೀನಿವಾಸ ಮಾನೆ 7598 ಮತಗಳಿಂದ ಗೆಲುವು ಸಾಧಿಸಿದರು. ಈ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ತವರು ಜಿಲ್ಲೆಯಲ್ಲಿಯೇ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಸಾಧ್ಯವಾಗದೆ, ತೀವ್ರ ಮುಖಭಂಗ ಅನುಭವಿಸಿದರು. ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 62,292 ಮತ ಪಡೆದರೆ, ಬಿಜೆಪಿಯ ರಮೇಶ್ ಭೂಸನೂರು 93,380 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‍ನ ನಾಜಿಯಾ ಅಂಗಡಿ 4321 ಮಾತ್ರ ಗಳಿಸಿದರು.

ಹಾನಗಲ್ ನಲ್ಲಿ ಕಾಂಗ್ರೆಸ್  ಅಭ್ಯರ್ಥಿ ಶ್ರೀನಿವಾಸ್ ಮಾನೆ  83324 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್  75999 ಪಡೆದು ಸೂಲು ಅನುಭವಿಸಿದರು. ಆದರೆ ಜೆಡಿಎಸ್ ಅಭ್ಯರ್ಥಿ ನೀರಜ್ ಶೇಕ್  ಕೇವಲ 921 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಹಾನಗಲ್‌ನಲ್ಲಿ ಶಾಸಕರಾಗಿದ್ದ ಸಿ. ಎಂ. ಉದಾಸಿ ನಿಧನದಿಂದ ಮತ್ತು ಸಿಂಧಗಿಯಲ್ಲಿ ಶಾಸಕರಾಗಿದ್ದ ಎಂ. ಸಿ. ಮುನಗೂಳಿ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಬಹುನಿರೀಕ್ಷದ ಆಡಳಿತರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಸಮ ಭಲ ಸಾಧಿಸಿವೆ.