ಸೈನಿಕರ ಹತ್ಯೆಗೆ ಸೇಡು ತೀರಿಸಿಕೊಂಡ ಅಮೆರಿಕಾ; ಐಸಿಎಸ್ ಉಗ್ರರ ಮೇಲೆ ಏರ್ಸ್ಟ್ರೈಕ್

ಅಫ್ಘಾನಿಸ್ತಾನದಲ್ಲಿ ತನ್ನ ದೇಶದ ಸೈನಿಕರ ಮೇಲಿನ ಆತ್ಮಾಹುತಿ ಬಾಂಬ್ ದಾಳಿಗೆ ಅಮೆರಿಕಾ ಪ್ರತೀಕಾರಕ್ಕೆ ಮುಂದಾಗಿದೆ. ಅಫ್ಘಾನ್ ನ ನಂಗಾಹರ್ ಪ್ರಾಂತ್ಯದ ಮೇಲೆ ಅಮೆರಿಕಾ ಸೇನಾ ಪಡೆಗಳು ಡ್ರೋನ್ ಮೂಲಕ ಏರ್ ಸ್ಟ್ರೈಕ್ ನಡೆಸಿವೆ. ಕಾಬೂಲ್ ಏರ್ಪೋರ್ಟ್ ಮೇಲೆ ದಾಳಿ ನಡೆಸಿದ್ದ ಐಸಿಎಸ್ ಖೋರಾಸನ ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದು ಶಪಥ ಮಾಡಿದ್ದ ಅಮೆರಿಕಾ, 36 ಗಂಟೆಗಳಲ್ಲಿ ದಾಳಿ ನಡೆಸಿದೆ.
ಪೂರ್ವ ಅಫ್ಘಾನಿಸ್ತಾನದಲ್ಲಿ ಐಸಿಎಸ್ ಖೋರಾಸನ ಉಗ್ರರ ಮೇಲೆ ಅಮೆರಿಕಾ ಏರ್ ಸ್ಟ್ರೈಕ್ ನಡೆಸಿದ್ದು, ಅಮೆರಿಕಾದ ಸೆಂಟ್ರಲ್ ಕಮ್ಯಾಂಡ್ ಈ ಬಗ್ಗೆ ಮಾಹಿತಿ ನೀಡಿದೆ. ಈ ದಾಳಿಯಲ್ಲಿ ಉಗ್ರರನ್ನು ಕೊಂದಿದ್ದೇವೆ ಎಂದು ಅಮೆರಿಕಾ ಹೇಳಿದೆ. ಆದರೆ ಘಟನೆಯಲ್ಲಿ ಎಷ್ಟು ಮಂದಿ ಉಗ್ರರು ಮೃತಪಟ್ಟಿದ್ದಾರೆ ಎಂಬ ಎಂಬ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.
ಇತ್ತ ಉಗ್ರರ ದಾಳಿಗೆ ಗುರಿಯಾಗಿದ್ದ ಕಾಬೂಲ್ ಏರ್ಪೋರ್ಟ್ ಬಳಿ ಬಿಗಿಭದ್ರತೆ ವಹಿಸಲಾಗಿದೆ. ಕಾಬೂಲ್ ಏರ್ಪೋರ್ಟ್ ಗೇಟ್ ಬಳಿ ಹೋಗದಂತೆ ಆಮೆರಿಕಾದ ನಾಗರಿಕರಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ಏರ್ಪೋರ್ಟ್ ಬಳಿ ದೊಡ್ಡ ಸ್ಪೋಟ ನಡೆಸಲು ಐಸಿಎಸ್ ಸಂಚು ನಡೆಸಿದೆ ಎಂಬ ಮಾಹಿತಿಯನ್ನು ಅಮೆರಿಕಾ ಗುಪ್ತಚರ ಇಲಾಖೆ ನೀಡಿದ್ದು, ಮತ್ತಷ್ಟು ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಕಾಬೂಲ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಗ್ರ ಸಂಘಟನೆಗೆ ನಿನ್ನೆಯಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಖಡಕ್ ಎಚ್ಚರಿಕೆ ನೀಡಿದ್ದರು. ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ. ನೀವು ಎಲ್ಲೇ ಅವಿತಿದ್ದರೂ ಕೊಲ್ಲುತ್ತೇವೆ ಎಂದು ಬೈಡನ್ ಎಚ್ಚರಿಸಿದ್ದರು. ಮೊನ್ನೆ ನಡೆದ ಕಾಬೂಲ್ ಏರ್ಪೋರ್ಟ್ ಮೇಲಿನ ಉಗ್ರರ ದಾಳಿಯಲ್ಲಿ ಅಮೆರಿಕಾ ಸೇನೆಯ 13 ಯೋಧರು ಹಾಗೂ ಸುಮಾರು 72 ನಾಗರಿಕರು ದಾರುಣವಾಗಿ ಮೃತಪಟ್ಟಿದ್ದರು.