ಸುಪ್ರೀಂ ಕೋರ್ಟ್ ಇಮೇಲ್ ನಿಂದ ಮೋದಿ ಫೋಟೋ ಕಿತ್ತುಹಾಕಿ: ಕೋರ್ಟ್ನ ಫೋಟೋ ಅಳವಡಿಸಲು ಸುಪ್ರೀಂ ಸೂಚನೆ

ಸುಪ್ರೀಂಕೋರ್ಟ್‌ನ ಅಧಿಕೃತ ಇ-ಮೇಲ್‌ಗಳಲ್ಲಿನ ಮೋದಿ ಫೋಟೋ ಹಾಗೂ ಸಬ್‌ಕಾ ಸಾತ್ ಸಬ್‌ಕಾ ವಿಕಾಸ್’ ಎಂಬ ಘೋಷಣೆಯನ್ನು ತಕ್ಷಣ ಕಿತ್ತುಹಾಕುವಂತೆ ಸುಪ್ರೀಂ ಕೋರ್ಟ್, ನ್ಯಾಷನಲ್ ಇನ್ಫಾರ್ಮೇಟಿಕ್ಸ್ ಸೆಂಟರ್ (ಎನ್‌ಐಸಿ)ಗೆ ಆದೇಶ ನೀಡಿದೆ. ಇದರ ಬದಲಾಗಿ ದೇಶದ ಅತ್ಯುನ್ನತ ಕೋರ್ಟ್‌ನ ಚಿತ್ರವನ್ನು ಅಳವಡಿಸುವಂತೆ ಸೂಚಿಸಿದೆ.
ಅನೇಕ ವಕೀಲರು ನೀಡಿದ ದೂರನ್ನು ಆಧರಿಸಿ ಸುಪ್ರೀಂ ಕೋರ್ಟ್ ರಿಜಿಸ್ಟರ್ ನಿನ್ನೆ ಎನ್‌ಐಸಿಗೆ ಪತ್ರವನ್ನು ಬರೆದಿದ್ದಾರೆ. ಇಮೇಲ್ನಲ್ಲಿ ʼಆಜಾದಿ ಕಾ ಮಹೋತ್ಸವ್ʼ ಘೋಷ ವಾಕ್ಯ ಹಾಗೂ ಇದರೊಂದಿಗಿರುವ ಪ್ರಧಾನಿ ಮೋದಿ ಫೋಟೋವನ್ನು ಅಳಿಸಿ ಹಾಕಿ ಸುಪ್ರೀಂ ಕೋರ್ಟ್ನದ್ದೇ ಫೋಟೋ ಹಾಕುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ದೇಶದ ಸರ್ವೋಚ್ಚ ನ್ಯಾಯಾಲಯದ ಇ-ಮೇಲ್ ಸೇವೆಗಳನ್ನು ನಿರ್ವಹಿಸುತ್ತಿರುವ ಎನ್‌ಐಸಿ, ಕೋರ್ಟ್‌ನ ಗಮನಕ್ಕೆ ಬಾರದೇ ಈ ಸ್ಲೋಗನ್ ಮತ್ತು ಚಿತ್ರವನ್ನು ಇ-ಮೇಲ್‌ನ ತಳಭಾಗದಲ್ಲಿ ಬರುವಂತೆ ಸೇರಿಸಿತ್ತು ಎನ್ನಲಾಗಿದೆ. ಇದು ಸುಪ್ರೀಂಕೋರ್ಟ್ ರಿಜಿಸ್ಟ್ರಿ ಗಮನಕ್ಕೆ ಬಂದಿದೆ, ನಂತರ ಸುಪ್ರೀಂಕೋರ್ಟ್‌ನಿಂದ ಮಾಡಲಾಗುವ ಇ-ಮೇಲ್‌ಗಳಲ್ಲಿ ಈ ಫೂಟರ್ ಅನ್ನು ತಕ್ಷಣವೇ ಕೈಬಿಡುವಂತೆ ಎನ್‌ಐಸಿಗೆ ಸೂಚನೆ ನೀಡಲಾಗಿದೆ.