ಸಿದ್ದರಾಮಯ್ಯನವರ ಆ ಕನಸು ಯಾವುದೇ ಕಾರಣಕ್ಕೂ ನನಸಾಗಲ್ಲ: ಸುಧಾಕರ್, ಈಶ್ವರಪ್ಪ ವ್ಯಂಗ್ಯ

 ಸಿದ್ದರಾಮಯ್ಯನವರ ಆ ಕನಸು ಯಾವುದೇ ಕಾರಣಕ್ಕೂ ನನಸಾಗಲ್ಲ: ಸುಧಾಕರ್, ಈಶ್ವರಪ್ಪ ವ್ಯಂಗ್ಯ

ಮಾಜಿ ಸಿಎಂ ಸಿದ್ದರಾಮಯ್ಯ ಒಬ್ಬ ಕೆಟ್ಟ ಕನಸುಗಾರ. ಸರ್ಕಾರ ಬಿದ್ದು ಹೋಗುತ್ತದೆ,  ನಾನು ಮತ್ತೆ ಸಿಎಂ ಆಗಬಹುದು ಎಂದು ಅವರು ಕನಸು ಕಂಡಿದ್ದರು. ಆದರೆ ಅದು ಹುಸಿಯಾಗಿದೆ, ಈ ಸರ್ಕಾರ ತನ್ನ ಅವಧಿ ಪೂರ್ಣಗೊಳಿಸಲಿದೆ.ಮಧ್ಯಂತರ ಚುನಾವಣೆ ಯಾವಾಗ ಬೇಕಾದ್ರೂ ಬರಬಹುದು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಡಾ.ಕೆ.ಸುಧಾಕರ್​ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಕನಸು ನನಸಾಗಲ್ಲ. ಸಿದ್ದರಾಮಯ್ಯನವರು ಚೆನ್ನಾಗಿ ಕನಸು ಕಾಣ್ತಿದ್ದಾರೆ, ಅವರು ಕನಸು‌ ಕಾಣ್ತಾನೇ ಇರಲಿ ಎಂದು ವ್ಯಂಗ್ಯವಾಡಿದರು. ಇನ್ನು ಸಚಿವ ಸಂಪುಟ ರಚನೆ  ‘ಬಗ್ಗೆ ಬೆಟ್ಟ ಅಗೆದು ಇಲಿ ಹಿಡಿದ್ರು ಎಂಬ ಮಾತಿಗೆ ಪ್ರತಿಕ್ರಿಯಿಸಿದ ಸುಧಾಕರ್​, ಸಿಎಂ‌ ಬದಲಾವಣೆ ಹಾಗೂ ಸಂಪುಟ ರಚನೆ ಬಿಜೆಪಿ ಪಕ್ಷದ ತೀರ್ಮಾನ. ನಮ್ಮ ಪಕ್ಷ ಹಾಗೂ ನಾಯಕರ ತೀರ್ಮಾನ. ಸಿದ್ದರಾಮಯ್ಯನವರಿಗೆ ಯಾಕೆ ಈ ಉಸಾಬರಿ ಎಂದು ಟಾಂಗ್​ ಕೊಟ್ಟರು.

ಈ ಸರ್ಕಾರ ಆಡಳಿತ ಹೇಗೆ ಕೊಡುತ್ತೆ ಅಂತ ವ್ಯಾಖ್ಯಾನ ಕೊಡಲಿ. 2-3 ತಿಂಗಳು ಸಿಎಂ ಹೇಗೆ ವ್ಯವಹರಿಸ್ತಾರೆ ಅಂತ ನೋಡ್ತೀವಿ ಅಂತ ಹೇಳಿದ್ರು. ಆದ್ರೆ ಎರಡೇ ದಿನಕ್ಕೆ ಈ ರೀತಿ ಮಾತಾಡ್ತಿದ್ದಾರೆ ಎಂದು ಸಿದ್ದರಾಮಯ್ಯರನ್ನು ಸುಧಾಕರ್​ ಟೀಕಿಸಿದರು. ಎಲ್ಲಾ ಶಾಸಕರಿಗೆ ಮಂತ್ರಿಯಾಗಬೇಕು ಎಂಬ ಆಸೆ ಇರುತ್ತೆ. ಅದಕ್ಕೆ ಅರ್ಹತೆ ಆಕಾಂಕ್ಷೆ ಸಹ ಇರುತ್ತೆ. ಆದ್ರೆ ಎಲ್ಲರನ್ನೂ ಸಂಪುಟದಲ್ಲಿ ಸೇರಿಸಿಕೊಳ್ಳಲು ಅಸಾಧ್ಯ.ಪ್ರಾದೇಶಿಕ ಸಮತೋಲನ, ಜಾತಿವಾರು ಅವಕಾಶದ ಆಧಾರದ ಮೇಲೆ ಸಂಪುಟ ರಚನೆ ಆಗಿದೆ. ಸಿಎಂ ಹಾಗೂ ಬಿಜೆಪಿ ನಾಯಕರು ಸಂಪುಟ ರಚನೆ ಮಾಡಿದ್ದಾರೆ. ಅವಕಾಶ ವಂಚಿತರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ದೊರೆಯಲಿದೆ ಎಂದರು.

ಇನ್ನು ರಾಜ್ಯದಲ್ಲಿ ಪ್ರವಾಸಿ ತಾಣಗಳು ಕೋರೋನಾ ಹಾಟ್ ಸ್ಪಾಟ್ ಗಳಾಗಿವೆ. ಆನೇಕ ಪ್ರವಾಸಿ ತಾಣಗಳಲ್ಲಿ ಜನ ಸೇರುತ್ತಿದ್ದಾರೆ, ಇದು ಕೋವಿಡ್ ಹೆಚ್ಚಾಗಲು ಕಾರಣ ಆಗುವ ಅಪಾಯ ಇದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ತೇವೆ ಎಂದು ತಿಳಿಸಿದರು.

ಸಂಪುಟ ರಚನೆ ಬಗ್ಗೆ ಶಿವಮೊಗ್ಗದಲ್ಲಿ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಸಂಪುಟ ರಚನೆಯ ಎಲ್ಲಾ ಗೊಂದಲ ಬಗೆಹರಿದಿದೆ. ಸಣ್ಣ ಪುಟ್ಟ ಗೊಂದಲಗಳನ್ನು ಪಕ್ಷದ ವರಿಷ್ಠರು ಬಗೆಹರಿಸಲಿದ್ದಾರೆ. ಇನ್ನೆರಡು ದಿನಗಳಲ್ಲಿ ಖಾತೆ ಹಂಚಿಕೆ ಆಗಲಿದೆ. ನಾನು ಇಂತಹುದೇ ಖಾತೆ ಬೇಕು ಎಂದು ಕೇಳುವುದಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇವೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.