ಸಿಎಂ ಬೊಮ್ಮಾಯಿಯನ್ನು ಬಲಿ ಪಡೆಯಲಿದೆ ಬಿಟ್ಕಾಯಿನ್ ಪ್ರಕರಣ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

 ಸಿಎಂ ಬೊಮ್ಮಾಯಿಯನ್ನು ಬಲಿ ಪಡೆಯಲಿದೆ ಬಿಟ್ಕಾಯಿನ್ ಪ್ರಕರಣ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

ಕಲಬುರಗಿ: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿರುವ ಬಿಟ್‍ಕಾಯಿನ್ ಹಗರಣ ದಿನದಿಂದ ದಿನಕ್ಕೆ ಒಂದೋಂದು ತಿರುವು ಪಡೆಯುತ್ತಿದೆ. ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆಯಾದರೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮೂರನೆ ಮುಖ್ಯಮಂತ್ರಿಯನ್ನು ನೋಡಬೇಕಾಗುತ್ತದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಬಿಟ್‍ಕಾಯಿನ್ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದಾರೆ ಎಂದು ನಾನು ಹೇಳುವುದಿಲ್ಲ. ತನಿಖೆ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ಯಾರೆಲ್ಲ ಇದರಲ್ಲಿ ಭಾಗಿಯಾಗಿದ್ದಾರೆ ಎಂಬುದು ಗೊತ್ತಿದೆ. ನಿಷ್ಪಕ್ಷಪಾತ ತನಿಖೆಯಾದರೆ ಮುಖ್ಯಮಂತ್ರಿ ಸ್ಥಾನವನ್ನು ಹಗರಣ ಬಲಿ ತೆಗೆದುಕೊಳ್ಳುತ್ತದೆ. ಈ ಬಾರಿಯೂ ಕೂಡ ಬಿಜೆಪಿ ಸರ್ಕಾರದಲ್ಲಿ ಮೂರು ಜನ ಸಿಎಂ ಆಗುತ್ತಾರೆ ಎಂದರು.

ಹಗರಣದಲ್ಲಿ ಬೇರೆ ಪಕ್ಷದವರ ಕೈವಾಡವಿದ್ದರೆ ಅದನ್ನೂ ಬಹಿರಂಗಪಡಿಸಲಿ. ಇದು ಅಂತಾರಾಷ್ಟ್ರೀಯ ಮಟ್ಟದ ಹಗರಣ. ಅದನ್ನು ಉನ್ನತ ಮಟ್ಟದ ತನಿಖೆಗೆ ವಹಿಸಲು ವಿಳಂಬ ಮಾಡುತ್ತಿರುವುದೇಕೆ  ಎಂದು ಪ್ರಶ್ನಿಸಿದರು. ಬಿಟ್‍ಕಾಯಿನ್ ಒಂದೇ ಅಲ್ಲ ಕ್ರಿಪೆಪೊ ಕರೆನ್ಸಿಯಲ್ಲೂ ಬಿಜೆಪಿಯವರು ಲಂಚ ಪಡೆದಿದ್ದಾರೆ ಎಂದು ಆರೋಪಿಸಿದರು.
ಪ್ರಕರಣದಲ್ಲಿ 200-300 ಕೋಟಿ ವಹಿವಾಟು ನಡೆದಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕಿಂತಲೂ ದೊಡ್ಡ ಪ್ರಮಾಣದ ಹಗರಣವಾಗಿರುವ ಮಾಹಿತಿ ಇದೆ. ಬಿಜೆಪಿಯವರು ಡ್ರಗ್ಸ್ ಕೇಸ್ ಮುಚ್ಚಿಹಾಕಲು ಲಂಚ ಪಡೆದಿದ್ದಾರೆ. ಬಿಟ್‍ಕಾಯಿನ್ ಹಗರಣದಲ್ಲಿ ಸಚಿವರೂ ಸೇರಿದಂತೆ ಬಿಜೆಪಿಯ ಉನ್ನತ ನಾಯಕರು ಭಾಗಿಯಾಗಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದರು.