ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಗಳಿಗೆ ಬಿಜೆಪಿ ಉಸ್ತುವಾರಿ ನೇಮಕ: ಬಿ.ಎಸ್.ವೈ ಪುತ್ರ ವಿಜಯೇಂದ್ರಗೆ ಸಿಗದ ಸ್ಥಾನ

 ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಗಳಿಗೆ ಬಿಜೆಪಿ ಉಸ್ತುವಾರಿ ನೇಮಕ: ಬಿ.ಎಸ್.ವೈ ಪುತ್ರ ವಿಜಯೇಂದ್ರಗೆ ಸಿಗದ ಸ್ಥಾನ

ಬೆಂಗಳೂರು:  ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಬಿಜೆಪಿಯಲ್ಲಿ ಬಿ.ಎಸ್ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ಕಡೆಗಣಿಸಲಾಗುತ್ತಿದೆ ಎಂಬ ಮಾತು ಕೇಳಿ ಬುರುತ್ತಿದೆ. ಇದಕ್ಕೆ ಇತ್ತೀಚಿನ ಬಿಜೆಪಿ ನಿರ್ಧಾರಗಳೇ ಪುಷ್ಠಿ ನೀಡುತ್ತಿವೆ. ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ ಇಂದು ಉಸ್ತುವಾರಿಗಳನ್ನು ನೇಮಕ ಮಾಡಿದೆ. ಎರಡೂ ಕ್ಷೇತ್ರಗಳ ಉಸ್ತುವಾರಿ ಪಟ್ಟಿಯಲ್ಲಿ ಮಾಜಿ ಸಿಎಂ ಬಿಎಸ್‍ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಅವರಿಗೆ ಸ್ಥಾನ ಸಿಗದಿರುವುದು, ಅವರ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ಸಿಂಧಗಿ ವಿಧಾನ ಸಭೆ ಕ್ಷೇತ್ರಕ್ಕೆ ಗೋವಿಂದ್ ಕಾರಜೋಳ, ವಿ.ಸೋಮಣ್ಣ, ಸಿ.ಸಿ ಪಾಟೀಲ್, ಶಶಿಕಲಾ ಜೊಲ್ಲೆ, ರಮೇಶ್ ಜಿಗಜಿಣಗಿ, ಬಸನಗೌಡ ಪಾಟೀಲ್ ಯತ್ನಾಳ, ಲಕ್ಷ್ಮಣ ಸವದಿ, ಸೋಮನಗೌಡ ಪಾಟೀಲ್, ಎ.ಎಸ್. ಪಾಟೀಲ್ ನಡಹಳ್ಳಿ, ಪಿ.ರಾಜೀವ್, ಶ್ರೀಕಾಂತ್ ಕುಲಕರ್ಣಿ ಹಾಗೂ ಬಾಬುರಾವ್ ಚಿಂಚನಸೂರು ಅವರನ್ನು ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.

ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೆ ಮುರುಗೇಶ್ ನಿರಾಶಿ, ಜೆ.ಸಿ ಮಾಧುಸ್ವಾಮಿ, ಬಿ.ಸಿ ಪಾಟೀಲ್, ಶಿವರಾಮ್ ಹೆಬ್ಬಾರ್, ಶಿವಕುಮಾರ್ ಉದಾಸಿ, ಎನ್. ರವಿಕುಮಾರ್ , ಮಹೇಶ್ ಟೆಂಗಿನಕಾಯಿ, ಹಾಗೂ ರಾಜುಗೌಡ, ನೆಹರೂ ಓಲೇಕಾರ್, ಎಂ ಚಂದ್ರಪ್ಪ, ವಿರೂಪಕ್ಷಪ್ಪ ಬಳ್ಳಾರಿ ಹಾಗೂ ಅರುಣ್ ಕುಮಾರ್ ಗುತ್ತೂರು ಅವರಿಗೆ ಉಸ್ತುವಾರಿಯ ಹೊಣೆ ನೀಡಲಾಗಿದೆ. ಈ ಹಿಂದೆ ನಡೆದಿದ್ದ ಹಲವು ಉಪಚುನಾವಣೆಗಳಲ್ಲಿ ಬಿಎಸ್ವೈ ಪುತ್ರ ವಿಜಯೇಂದ್ರಗೆ ಉಸ್ತುವಾರಿ ನೀಡಲಾಗಿತ್ತು. ಇದರಿಂದಾಗಿ ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಪ್ರಮುಖ ನಾಯಕರ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಸಿಎಂ ಸ್ಥಾನದಿಂದ ಯಡಿಯೂರಪ್ಪ ಇಳಿದ ಕ್ಷಣದಿಂದ ಅವರನ್ನು ಕಡೆಗಣಿಸಲಾಗುತ್ತಿದೆ ಎನ್ನಲಾಗಿದೆ. ಈ ಹಿಂದೆ ಬಿಎಸ್ವೈ ರಾಜ್ಯ ಪ್ರವಾಸಕ್ಕೆ ನಿರ್ಬಂಧಿಸಿದ್ದ ಹೈಕಮಾಂಡ್, ಈಗ ಪುತ್ರನನ್ನು ಚುನಾವಣೆಗಳಿಂದ ದೂರ ಇರಿಸಿದೆ.

ಇನ್ನು ಹಾವೇರಿ ಜಿಲ್ಲೆಯ ಹಾನಗಲ್ ಹಾಗೂ ವಿಜಯಪುರ ಜಿಲ್ಲೆ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಗೆ ಅಕ್ಟೋಬರ್ 1 ರಿಂದ ಅಧಿಸೂಚನೆ ಹೊರಡಿಸಲಾಗಿದೆ. ಅಕ್ಟೋಬರ್ 8 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ. ಅಕ್ಟೋಬರ್ 11 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಕ್ಟೋಬರ್ 13 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಅಕ್ಟೋಬರ್ 30 ರಂದು 2 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.