ಸಾರ್ವಜನಿಕ ಸಭೆ-ಸಮಾರಂಭಗಳಿಗೆ ಕಡಿವಾಣ: ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ

ಬೆಂಗಳೂರು: ಮಹಾಮಾರಿ ಕೊರೋನಾ ನಿಯಂತ್ರಣದ ಸಂಬಂಧ, ಸಾರ್ವಜನಿಕ ಸಭೆ–ಸಮಾರಂಭಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜಕೀಯ ಸಭೆ, ಸಮಾರಂಭಗಳಿಗೆ ಯಾವುದೇ ನಿರ್ಬಂಧ ಹಾಕದ ಸರ್ಕಾರ, ಗಣೇಶೋತ್ಸವಕ್ಕೆ ಕಡಿವಾಣ ಹಾಕಿದೆ. ಈ ಬಗ್ಗೆ ವ್ಯಾಪಕ ಟೀಕೆಗಳು ಬರುತ್ತಿವೆ. ಈ ಬಗ್ಗೆ ಉತ್ತರಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕೊರೋನಾ ನಡುವೆಯೂ ರಾಜಕೀಯ ಸಭೆ, ಸಮಾರಂಭ, ರ್ಯಾಲಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿರ್ಬಂಧ ಹೇರಲು ಕಠಿಣ ನಿಯಮಗಳನ್ನು ಜಾರಿ ಮಾಡಲಾಗುವುದು. ಕೋವಿಡ್ ಸೋಂಕು ಹರಡುವ ಭೀತಿ ದಟ್ಟವಾಗಿದ್ದು, ಇದಕ್ಕೆಲ್ಲ ಶೀಘ್ರವೇ ಬ್ರೇಕ್ ಹಾಕುತ್ತೇವೆ. ರಾಜಕೀಯ ಸಭೆ, ಸಮಾರಂಭಗಳಿಗೆ ಮಾರ್ಗಸೂಚಿ ಹೊರಡಿಸುತ್ತೇವೆ ಎಂದರು.
ಇನ್ನೂ ಉತ್ತರ ಕರ್ನಾಟಕ, ಉತ್ತರ ಕನ್ನಡ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ಪ್ರವಾಹ ಪರಿಸ್ಥಿತಿ ನಂತರದ ಪರಿಸ್ಥಿತಿ, ಆಗಿರುವ ನಷ್ಟಗಳ ಅಂದಾಜನ್ನು ಪರಿಶೀಲನೆ ಮಾಡಲು ಕೇಂದ್ರದ ತಂಡ ಬಂದಿದೆ. ಅವರ ಜೊತೆ ಮತ್ತು ನಮ್ಮ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆಸಿ ಸಭೆ ನಡೆಸಲಾಗುವುದು. ಎನ್ ಡಿಆರ್ ಎಫ್ ನಿಯಮದಡಿ ನಮ್ಮ ರಾಜ್ಯದ ಬೇಡಿಕೆಯನ್ನು ಕೇಂದ್ರ ಈಡೇರಿಸಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಕೋವಿಡ್ ಪರಿಸ್ಥಿತಿ ನೋಡಿ 1ನೇ ತರಗತಿಯಿಂದ ಶಾಲೆ ಆರಂಭ
1ನೇ ತರಗತಿಯಿಂದ ಶಾಲೆಗಳ ಪುನರಾರಂಭದ ಬಗ್ಗೆ ಪ್ರತಿಕ್ರಿಸಿದ ಸಿಎಂ, ಸದ್ಯ ನಾಡಿದ್ದು ಸೋಮವಾರದಿಂದ 6ನೇ ತರಗತಿಯಿಂದ 8ನೇ ತರಗತಿಯವರೆಗೆ ಶಾಲೆಗಳು ಆರಂಭವಾಗುತ್ತಿವೆ. ಅವು ಯಾವ ರೀತಿ ನಡೆಯುತ್ತದೆ, ಕೊರೋನಾ ಪರಿಸ್ಥಿತಿ ಹೇಗಿರುತ್ತದೆ ಎಂದು ನೋಡಿಕೊಂಡು ಪರಿಶೀಲಿಸಿ ಮುಂದಿನ ದಿನಗಳಲ್ಲಿ 1ನೇ ತರಗತಿಯಿಂದ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.