ವಿಶ್ವಸಂಸ್ಥೆಯ ಸಭೆಯಲ್ಲಿ ಮತ್ತೆ ಕಾಶ್ಮೀರ ವಿಷಯ ಕೆದಕಿದ ಪಾಕ್; ಆಕ್ರಮಿತ ಪ್ರದೇಶ ಖಾಲಿ ಮಾಡಿ ಎಂದ ಭಾರತ

 ವಿಶ್ವಸಂಸ್ಥೆಯ ಸಭೆಯಲ್ಲಿ ಮತ್ತೆ ಕಾಶ್ಮೀರ ವಿಷಯ ಕೆದಕಿದ ಪಾಕ್; ಆಕ್ರಮಿತ ಪ್ರದೇಶ ಖಾಲಿ ಮಾಡಿ ಎಂದ ಭಾರತ

ನ್ಯೂರ್ಯಾಕ್: ವಿಶ್ವಸಂಸ್ಥೆಯ 76ನೇ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್  ಅವರು ಮತ್ತೆ ಜಮ್ಮು‌ ಹಾಗೂ ಕಾಶ್ಮೀರದ ವಿವಾದವನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ ಪಾಕಿಸ್ತಾನದ ನಿಲುವಿಗೆ ತಿರುಗೇಟು ನೀಡಿದೆ. ‘ಜಮ್ಮು – ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿವೆ. ಕೂಡಲೇ ಪಾಕಿಸ್ತಾನವು‌ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭೂಪ್ರದೇಶಗಳನ್ನು ಖಾಲಿ ಮಾಡಬೇಕು’ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಸ್ನೇಹ ದುಬೆ ಹೇಳಿದ್ದಾರೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರ‌ ವಿವಾದದ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಭಾರತದಲ್ಲಿ ನರೇಂದ್ರ ಮೋದಿಯವರ ಹಿಂದೂ ರಾಷ್ಟ್ರೀಯವಾ ಸರ್ಕಾರ ಫ್ಯಾಸಿಸ್ಟ್ ಸರ್ಕಾರ. ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ತೆಗೆದುಹಾಕಿದ್ದು ಭಾರತ ಸರ್ಕಾರ ಮಾಡಿದ ಮಾನವ ಹಕ್ಕುಗಳ ಸಮಗ್ರ ಮತ್ತು ವ್ಯವಸ್ಥಿತ ಉಲ್ಲಂಘನೆ ಎಂದು ಖಂಡಿಸಿದರು. ಕಾಶ್ಮೀರದಲ್ಲಿ ನಿಧನರಾದ ಪ್ರತ್ಯೇಕವಾದ ನಾಯಕನಿಗೆ ಸರಿಯಾದ ಸಮಾಧಿಯನ್ನು ನಿರಾಕರಿಸಲಾಯಿತು ಎಂದು ದೂರಿದರು. ಇದೇ ವೇಳೆ ಅಮೆರಿಕಾದ ವಿರುದ್ಧ ಸಹ ವಾಗ್ದಾಳಿ ನಡೆಸಿದ ಪಾಕ್ ಪ್ರಧಾನಿ, ಯುಎಸ್.ಎನ ದ್ವಿಮುಖ ನೀತಿಗೆ ಪಾಕಿಸ್ತಾನ ಬಲಿಯಾಗುತ್ತಿದೆ ಆರೋಪ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ಸ್ನೇಹ ದುಬೆ, ‘ಪಾಕಿಸ್ತಾನವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದೆ.‌ ಭಯೋತ್ಪಾದಕರನ್ನು ಪಾಕಿಸ್ತಾನವು ಬಹಿರಂಗವಾಗಿ ಬೆಂಬಲಿಸುತ್ತಿದೆ. ಪಾಕಿಸ್ಥಾನವನ್ನು ಭಯೋತ್ಪಾದಕರಿಗೆ ತರಬೇತಿ ನೀಡುವ ಮತ್ತು ಹಣಕಾಸು ಒದಗಿಸುವ ದೇಶ ಎಂದೇ ಕರೆಯಲ್ಪಡಲಾಗುತ್ತದೆ. ಪಾಕಿಸ್ತಾನವು ನಂದಿಸುವಿಕೆಯ ಹೆಸರಿನಲ್ಲಿ ಬೆಂಕಿ ಹಚ್ಚುವ ದೇಶವಾಗಿದೆ’ ಎಂದಿದ್ದಾರೆ. ‘ಜಮ್ಮು – ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಶಗಿದ್ದು, ಭಾರತದ ಅವಿಭಾಜ್ಯ ಅಂಗವಾಗಿವೆ. ಕೂಡಲೇ ಪಾಕಿಸ್ತಾನವು‌ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭೂಪ್ರದೇಶಗಳನ್ನು ಖಾಲಿ ಮಾಡಬೇಕು ಎಂದು ಆಗ್ರಹಿಸಿದರು.