ವಿಶ್ವವನ್ನೇ ಕಂಗೆಡಿಸಿದ ಒಮಿಕ್ರೋನ್: ಹೊಸ ತಳಿಯ ಕೊರೋನಾ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

 ವಿಶ್ವವನ್ನೇ ಕಂಗೆಡಿಸಿದ ಒಮಿಕ್ರೋನ್: ಹೊಸ ತಳಿಯ ಕೊರೋನಾ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ನವದೆಹಲಿ: ವಿಶ್ವವನ್ನೇ ಕಂಗೆಡಿಸಿರುವ ಹೊಸ ತಳಿಯ ಒಮಿಕ್ರೋನ್ ಕೊರೊನಾ ಸೋಂಕಿನ ಪ್ರಸರಣ ಕೆಲವು ರಾಷ್ಟ್ರಗಳಲ್ಲಿ ತೀವ್ರತೆ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ಸೇರಿದಂತೆ ಏಳು ದೇಶಗಳಲ್ಲಿ ಹೊಸ ತಳಿಯ ಸೋಂಕು ಪತ್ತೆಯಾಗಿದೆ. ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರೋನ್ ಎಂದು ಹೆಸರಿಟ್ಟಿದೆ. ಹಿಂದಿನ ಎಲ್ಲಾ ಸೋಂಕುಗಳಿಗಿಂತಲೂ ರೂಪಾಂತರಿ ಅತ್ಯಂತ ವೇಗವಾಗಿ ಹರಡಲಿದೆ.

ಈ ಮೊದಲು ಕೋವಿಡ್ ಬಾಧಿತರಾಗಿ ಗುಣಮುಖರಾದವರಿಗೆ ಎರಡನೇ ಬಾರಿ ಸೋಂಕು ತಗುಲಿದರೂ ಹೆಚ್ಚಿನ ಅಪಾಯಗಳಿರುವುದಿಲ್ಲ ಎಂದು ಹೇಳಲಾಗಿತ್ತು. ಆದರೆ ಹೊಸ ರೂಪಾಂತರಿ ಮರುಕಳಿಸುವ ಸಾಧ್ಯತೆಗಳು ಹೆಚ್ಚಿವೆ ಮತ್ತು ಅಪಾಯದ ಮಟ್ಟವೂ ಕೂಡ ತೀವ್ರವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.ಅಲ್ಲದೆ ಹಾಲಿ ಲಭ್ಯ ಇರುವ ಲಸಿಕೆಗಳಿಗೆ ಇದು ಜಗ್ಗುವುದಿಲ್ಲ ಎಂಬ ವರದಿ ಇದೆ.

ಒಮಿಕ್ರೋನ್ ರೋಗ ಲಕ್ಷಣಗಳನ್ನು ತೋರಿಸದೆ ಏಕಾಏಕಿ ಆವರಿಸಿಕೊಳ್ಳಲಿದ್ದು, ಅದನ್ನು ಗುರುತಿಸುವ ವೇಳೆಗೆ ಅಪಾಯಕಾರಿ ಮಟ್ಟ ತಲುಪಿರುತ್ತದೆ. ಪ್ರಯೋಗಾಲಯ ಪರೀಕ್ಷೆಯಲ್ಲಿ ಮಾತ್ರ ಸೋಂಕನ್ನು ನಿಖರವಾಗಿ ಗುರುತಿಸಲು ಸಾಧ್ಯ ಎಂದು ಅದರ ತವರೂರು ದಕ್ಷಿಣ ಆಫ್ರಿಕಾದ ತಜ್ಞರು ಹೇಳಿದ್ದಾರೆ. ಹಾಲಿ ಲಭ್ಯ ಇರುವ ಲಸಿಕೆಗಳಿಗೆ ಇದು ಜಗ್ಗುವುದಿಲ್ಲ ಎನ್ನಲಾಗಿದೆ.

ಈ ಮೊದಲು ಕಾಣಿಸಿಕೊಂಡಿದ್ದ ಡೆಲ್ಟಾ ಸೋಂಕು ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿತ್ತು. ಆದರೆ ಅದು ನಿರೀಕ್ಷಿತ ಮಟ್ಟದ ಅಪಾಯ ಮಾಡಲಿಲ್ಲ. ಡೆಲ್ಟಾ ತನ್ನಷ್ಟಕ್ಕೆ ತಾನೇ ಕ್ಷೀಣಿಸಿದೆ. ಒಮಿಕ್ರೋನ್ ಸೋಂಕು ಡೆಲ್ಟಾಗಿಂತ ಅಪಾಯಕಾರಿ ಎಂದು ವಿಶ್ವ ಆರೋಗ್ಯ ಸಂಸ್ಥೆ ದೃಢ ಪಡಿಸಿದೆ. ವಿಶ್ವದ 27 ರಾಷ್ಟ್ರಗಳು ಈಗಾಗಲೇ ಸ್ವಯಂ ನಿರ್ಬಂಧ ವಿಧಿಸಿಕೊಂಡಿವೆ.ವಿಮಾನ ಪ್ರಯಾಣ, ವ್ಯಾಪಾರ ವಹಿವಾಟುಗಳಲ್ಲಿ ನಿರ್ಬಂಧಗಳನ್ನು ಮರು ಜಾರಿಗೊಳಿಸಲಾಗುತ್ತಿದೆ.

ರೂಪಾಂತರಿ ಸೋಂಕು ಪೀಡಿತ ಏಳು ರಾಷ್ಟ್ರಗಳಿಂದ ಪ್ರವಾಸಿಗರ ಆಗಮನಕ್ಕೆ ಅಮೆರಿಕಾ ತಡೆ ನೀಡಿದೆ. ಅಮೆರಿಕಾ, ಆಸ್ಟ್ರೇಲಿಯಾ, ಬ್ರಿಟನ್ ಸೇರಿದಂತೆ ಅನೇಕ ದೇಶಗಳು ನಿರ್ಬಂಧಗಳನ್ನು ಜಾರಿಗೊಳಿಸಿದ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಸಿ, ರೂಪಾಂತರಿ ಸೋಂಕು ತಡೆಗೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.