ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಮೋದಿ ವಾಸ್ತವ್ಯ

ಮೈಸೂರು: ವಿಶ್ವ ಯೋಗ ದಿನಾಚರಣೆಗಾಗಿ ನಗರಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದಾರೆ.
ನಗರದಲ್ಲಿ ಮೋದಿ ಜೂ.20 ಮತ್ತು 21ರಂದು ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಉಳಿದುಕೊಳ್ಳಲಿದ್ದು, ಈ ಎರಡು ದಿನಗಳಲ್ಲಿ ಭದ್ರತೆ ಹಾಗೂ ಆತಿಥ್ಯದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಮೋದಿ ಕಳೆದ ಬಾರಿ ನಗರಕ್ಕೆ ಭೇಟಿ ನೀಡಿದ ಸಂದರ್ಭ ಸಹ ರ‌್ಯಾಡಿಸನ್ ಬ್ಲೂ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು.
ಪ್ರಧಾನಿ ಭೇಟಿ ಸಂದರ್ಭ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಉಳಿದುಕೊಳ್ಳುವ ಹೋಟೆಲ್‌ನಲ್ಲಿ ಆಹ್ವಾನಿತರಲ್ಲದೆ ಬೇರೆಯವರಿಗೆ ಉಳಿದುಕೊಳ್ಳಲು ಅವಕಾಶ ಇಲ್ಲ. ಹೀಗಾಗಿ, ಶನಿವಾರದಿಂದ ಹೋಟೆಲ್‌ನಲ್ಲಿ ಬುಕ್ಕಿಂಗ್ ಕ್ಲೋಸ್ ಮಾಡಲಾಗಿದ್ದು, ಹೋಟೆಲ್ ಅನ್ನು ಸಂಪೂರ್ಣ ಮೋದಿಗೆ ಮೀಸಲಿರಿಸಲಾಗಿದೆ.
ಹೋಟೆಲ್‌ನಲ್ಲಿ ಉಳಿದುಕೊಂಡಿದ್ದ ಗ್ರಾಹಕರಿಗೆ ನಗರದ ಬೇರೆ ಹೋಟೆಲ್‌ಗಳಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ.
ಹೋಟೆಲ್‌ನ ಎಲ್ಲ ಭಾಗಗಳಲ್ಲೂ ಎಸ್‌ಪಿಜಿ ಸಿಬ್ಬಂದಿ ಕಾಣಿಸಿಕೊಂಡಿದ್ದಾರೆ. ಹೋಟೆಲ್ ಆವರಣದಲ್ಲಿ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸಹ ತಪಾಸಣೆ ನಡೆಸುತ್ತಿದ್ದಾರೆ. ಹೋಟೆಲ್ ಸುತ್ತಲಿನ ರಸ್ತೆಗಳು ಹಾಗೂ ಪಾದಚಾರಿ ಮಾರ್ಗದಲ್ಲೂ ತಪಾಸಣೆ ನಡೆಸಲಾಗುತ್ತಿದೆ. ಹೋಟೆಲ್ ಸುತ್ತಮುತ್ತಲಿನ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸಲಾಗಿದೆ. ಹೋಟೆಲ್ ಸುತ್ತಮುತ್ತ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.