ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಸೆ.27ಕ್ಕೆ ಭಾರತ ಬಂದ್: ರೈತ ಹೋರಾಟ ಯಶಸ್ವಿಗೊಳಿಸಲು ಆರ್.ಕೆ.ಎಸ್ನ ಎಂ. ಶಶಿಧರ್ ಕರೆ

 ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಸೆ.27ಕ್ಕೆ ಭಾರತ ಬಂದ್: ರೈತ ಹೋರಾಟ ಯಶಸ್ವಿಗೊಳಿಸಲು ಆರ್.ಕೆ.ಎಸ್ನ ಎಂ. ಶಶಿಧರ್ ಕರೆ

ತುಮಕೂರು: ಕೇಂದ್ರ ಸರ್ಕಾರದ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಸೆ.27ಕ್ಕೆ ಭಾರತ ಬಂದ್ ನೀಡಲಾಗಿದ್ದು, ರೈತರು ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ರೈತ-ಕೃಷಿ ಕಾರ್ಮಿಕ ಸಂಘಟನೆಯ ಉಪಾಧ್ಯಕ್ಚ ಎಂ.ಶಶಿಧರ್ ಕರೆ ನೀಡಿದರು. ರೈತ ಕೃಷಿ ಕಾರ್ಮಿಕರ ಸಂಘಟನೆ (ಆರ್.ಕೆ.ಎಸ್) ವತಿಯಿಂದ ನಗರದ ಟೌನ್ ಹಾಲ್ ಸರ್ಕಲ್ನ ಐಎಂಎ ಸಭಾಂಗಣದಲ್ಲಿ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಯಾದ ವಿಷಯಗಳ ಕುರಿತು ವಿಚಾರಗೋಷ್ಠಿ ನಡೆಯಿತು.ಈ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಶಿಧರ್, ದೇಶದ ಆರ್ಥಿಕತೆ ಇಂದು ಸಂಕಷ್ಟಕ್ಕೆ ಸಿಲುಕಿದೆ. ರೈತ ಮಸೂದೆಗಳು ಜಾರಿಗೆ ಬಂದರೆ ಇಡೀ ದೇಶ ಆಹಾರದ ಅಭದ್ರತೆ ಜೊತೆಗೆ ರೈತರ ಜಮೀನುಗಳು ದೊಡ್ಡ ಬಂಡವಾಳಗಾರರ ಮತ್ತು ಶ್ರೀಮಂತರ ಪಾಲಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಉದ್ದೇಶಿತ ಕಾಯ್ದೆಗಳು ಜಾರಿಯಾದರೆ, ಸಣ್ಣ ಪುಟ್ಟ ಜಮೀನಿನ ರೈತರು ಅನಿವಾರ್ಯ ವಾಗಿ ಶ್ರೀಮಂತರ ಪಾಲಾಗುತ್ತವೆ. ಏಕೆಂದರೆ ಈ ಮಸೂದೆಗಳ ತಿದ್ದುಪಡಿಗಳು ಲಾಭದಾಯಕ ಉದ್ದಿಮೆದಾರರ ಪರವಾಗಿವೆ. ಆದ್ದರಿಂದಲೇ ಇಂದು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮೇಲಿಂದ ಮೇಲೆ ನಡೆಯುತ್ತವೆ. ಈಗಾಗಲೇ ಹಲವಾರು ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಲಾಗಿದೆ. ಬಂಡವಾಳಶಾಹಿಗಳ ಆಸ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದೆಡೆ ಏಕಸ್ವಾಮ್ಯ ಬಂಡವಾಳವು ಅಂಬಾನಿ,ಅದಾನಿ,ಟಾಟಾ ಅಂಥವರ ಪಾಲಾಗುತ್ತಿದೆ ಎಂದು ಎಚ್ಚರಿಸಿದರು.

ಇಂದು ದೇಶದ ಆರ್ಥಿಕ ಸಂಪತ್ತಿನ ಒಡೆತನ ಶ್ರೀಮಂತ ಬಂಡವಾಳಗಾರರ ಕೈಯಲ್ಲಿ ಇದೆ. ಅದನ್ನು ಕಿತ್ತೊಗೆದು ದುಡಿಯುವ ವರ್ಗದ ಆರ್ಥಿಕತೆಯನ್ನು ತರಬೇಕು ಎಂದು ಕರೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಆರ್.ಕೆ.ಎಸ್ನ ತಿಪಟೂರು ತಾಲೂಕು ಸಂಚಾಲಕರಾದ ಲೋಕೆಶ್, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಲು ಸೆಪ್ಟೆಂಬರ್‌ 27ಭಾರತ ಬಂದ್ ಅತ್ಯವಶ್ಯಕ. ಕೃಷಿ ಕಾಯ್ದೆಗಳ ತಿದ್ದುಪಡಿ ವಿರುದ್ಧ ದೆಹಲಿಯ ಗಡಿಭಾಗದ ನಾಲ್ಕು ತಿಂಗಳಿಂದ ಹೋರಾಟ ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಕನ್ನು ಮುಚ್ಚಿ ಕುಳಿತಿದೆ. ಅಲ್ಲದೆ ಹೋರಾಟವನ್ನು ರಾಜಕೀಯಗೊಳಿಸಿ, ರೈತಚ ಚಳುವಳಿಯನ್ನು ವಿಫಲಗೊಳಿಸಲು ಯತ್ನಿಸುತ್ತದೆ. ಆದರೂ ದೆಹಲಿಯಲ್ಲಿ ಹೋರಾಟ ಮುಂದುವರೆದಿದೆ. ದೇಶದ ರೈತರು ಒಂದಾದರೆ ಈ ಚಳುವಳಿ ಯಶಸ್ವಿಯಾಗಲಿದೆ ಎಂದರು. ವಿಚಾರ ಸಂಕಿರಣದ ಕಾರ್ಯಕ್ರಮವನ್ನು ಕಾರ್ಮಿಕ ಮುಖಂಡರಾದ ಮಂಜುಳ ಗೋನವಾರ ನಡೆಸಿಕೊಟ್ಟರು. ಸಭೆಯಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಹಲವು ರೈತರು ಭಾಗಿಯಾಗದ್ದರು.