ರೈತರ ಮಹಾ ಪಂಚಾಯತ್ ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ : ರಾಕೇಶ್ ಟಿಕಾಯತ್ ಎಚ್ಚರಿಕೆ

 ರೈತರ ಮಹಾ ಪಂಚಾಯತ್ ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ : ರಾಕೇಶ್ ಟಿಕಾಯತ್ ಎಚ್ಚರಿಕೆ

ನವ ದೆಹಲಿ : ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ದ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಸೆ.5ಕ್ಕೆ ಸಂಯುಕ್ತ ಕಿಸಾನ್ ಮೋರ್ಚಾ, ಮಹಾ ಪಂಚಾಯತ್ ನನ್ನು ಆಯೋಜಿಸಿದೆ. ಈ ಬಗ್ಗೆ ಮಾತನಾಡಿದ ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್, ಮಹಾ ಪಂಚಾಯತ್ ಗೆ ದೇಶದಾದ್ಯಂತ ಸಹಸ್ರಾರು ರೈತರು ಭಾಗವಹಿಸಲಿದ್ದಾರೆ.  ಮಹಾ ಪಂಚಾಯತ್ ಗೆ ಬರುವ ರೈತರನ್ನು ಯಾರಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ. ಒಂದು ವೇಳೆ ರೈತರನ್ನು ತಡೆದರೇ, ನಾವು ಅದನ್ನು ಮೀರುತ್ತೇವೆ. ನಮ್ಮ ಗುರಿಯನ್ನು ತಲುಪಿಯೇ ತಲುಪುತ್ತೇವೆ ಎಂದು ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.

ಸರಿ ಸುಮಾರು 2000ಕ್ಕೂ ಅಧಿಕ ಮಂದಿ ರೈತರು ಅಮೃತಸರ, ಲುಧಿಯಾನದಿಂದ ಎಕ್ಸ್‌ ಪ್ರೆಸ್ ರೈಲುಗಳ ಮೂಲಕ ಬರಲಿದ್ದಾರೆ. ದೆಹಲಿ ಗಡಿಯಲ್ಲಿರುವ ಪ್ರತಿಭಟನಾ ಸ್ಥಳಗಳಿಂದ ಸಾವಿರಾರು ರೈತರು ಮಹಾಪಂಚಾಯತ್‌ ಗೆ ಆಗಮಿಸಲಿದ್ದಾರೆ.

ರೈತರು ಮುಖ್ಯವಾಗಿ ಉತ್ತರ ಪ್ರದೇಶದ ಹಳ್ಳಿ ಹಳ್ಳಿಗಳಿಂದ ಬರುತ್ತಿದ್ದಾರೆ. ಹರಿಯಾಣ, ಮಹಾರಾಷ್ಟ್ರ ಮತ್ತು ಭಾರತದ ಇತರ ಭಾಗಗಳ ರೈತರು ಸಹ ಸೇರುವ ನಿರೀಕ್ಷೆಯಿದೆ ಎಂದು ಟಿಕಾಯತ್ ತಿಳಿಸಿದ್ದಾರೆ. ಚುನಾವಣೆ ಆರು ತಿಂಗಳ ನಂತರ. ಯುಪಿಯಲ್ಲಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಯುಪಿಯಲ್ಲಿ ವಿದ್ಯುತ್ ದರಗಳು ಕೂಡ ಹೆಚ್ಚಾಗಿದೆ. ಕಳೆದ 2016 ರಿಂದ ಕಬ್ಬಿನ ದರ ಏರಿಕೆಯಾಗಿಲ್ಲ. ಕೇಂದ್ರವು ಇದನ್ನು ಪ್ರತಿ ಕಿಲೋಗ್ರಾಂಗೆ ಐದು ಪೈಸಯಂತೆ ಹೆಚ್ಚಿಸಿ, ರೈತರನ್ನು ಅವಮಾನಿಸುತ್ತಿದ್ದೀರಾ? ಎಂದು ಅವರು ಕಿಡಿ ಕಾರಿದ್ದಾರೆ.

ಕೇಂದ್ರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳು ಸೇರಿದಂತೆ ರೈತರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಲು ಆಯೋಜಿಸಲಾಗಿರುವ ‘ರೈತರ ಮಹಾಪಂಚಾಯತ್‌’ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.