ರೈತರನ್ನು ಗೂಂಡಾ ಎಂದ ಸಚಿವೆಗೆ ರಾಕೇಶ್ ಟಿಕಾಯತ್ ತಿರುಗೇಟು

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಗೂಂಡಾಗಳು ಎಂದು ಕರೆದಿರುವ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿಕೆಗೆ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ನೀಡಿರುವ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯವಲ್ಲ. ಭಾರತೀಯ ಜನತಾ ಪಕ್ಷದವರು ಲಿಖಿತ ರೂಪದಲ್ಲಿ ಬರೆದು ಕೊಟ್ಟಿದ್ದಾರೆ. ಹೀಗೆ ನೀಡಿರುವ ಹೇಳಿಕೆಯನ್ನೇ ಅವರು ಓದಿದ್ದಾರೆ. ವಿಷಯ ತಿಳಿಯದೇ ಮೀನಾಕ್ಷಿ ಲೇಖಿ ಏನೇನೋ ಹೇಳಿಕೆಗಳನ್ನು ನೀಡಬಾರದು. ಹಿಂದೂ ಮುಂದೂ ಗೊತ್ತಿಲ್ಲದೇ ಹೇಳಿಕೆ ನೀಡಿರುವ ಸಚಿವೆಯಿಂದ ಕ್ಷಮಾಪಣೆಯನ್ನು ನಾವು ನಿರೀಕ್ಷಿಸುವುದಿಲ್ಲ. ಒಂದು ವೇಳೆ ಅವರು ಕ್ಷಮಾಪಣೆ ಕೇಳಿದರೆ ಅದನ್ನು ಸ್ವಾಗತಿಸುತ್ತೇವೆ,” ಎಂದು ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ನವದೆಹಲಿಯ ಜಂತರ್ ಮಂತರ್ ಬಳಿ ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಸಾವಿರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ಹಲ್ಲೆ ನಡೆದಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ, ರೈತರನ್ನು ಗೂಂಡಾಗಳು ಎಂದು ಕರೆದಿದ್ದರು.
ರೈತರನ್ನು ಗೂಂಡಾಗಳು ಎಂದ ಸಚಿವೆ ಕ್ಷಮಾಪಣೆ: ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ನಿರಂತರ ಹೋರಾಟದಲ್ಲಿ ತೊಡಗಿರುವ ಅನ್ನದಾತರನ್ನು ಗೂಂಡಾಗಳು ಎಂದು ಕರೆದಿದ್ದರು. ಅಲ್ಲದೇ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ, ಗೂಂಡಾಗಳು, ಇವುಗಳು ಅಪರಾಧ ಚಟುವಟಿಕೆಗಳಾಗಿವೆ, ಜನವರಿ 26ರಂದು ಸಂಭವಿಸಿದ ಘಟನೆ ಸಹ ನಾಚಿಕೆಗೇಡಿನ ಅಪರಾಧವಾಗಿದೆ. ಇಂತಹ ಚಟುವಟಿಕೆಗಳನ್ನು ಪ್ರತಿಪಕ್ಷಗಳು ಪ್ರಚೋದಿಸುತ್ತಿವೆ ಎಂದು ಹೇಳಿದ್ದರು. ಇದೀಗ ತಮ್ಮ ಹೇಳಿಕೆಗೆ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕ್ಷಮಾಪಣೆ ಕೋರಿದ್ದಾರೆ.