ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ

ಬೆಂಗಳೂರು: ಬಿಟ್ ಕಾಯಿನ್ ಹಗರಣ ಹೊರಬಿದ್ದ ಬಳಿಕ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬೆಳವಣಿಗೆಗಳು ಶುರುವಾಗಿವೆ. ಹಲವು ಕಡೆಗಳಲ್ಲಿ ಚಟುವಟಿಕೆ ಬಿರುಸಾಗಿವೆ. ಸೈಲೆಂಟಾಗಿದ್ದ ಯಡಿಯೂರಪ್ಪ ಅವರ ಮನೆ ಇದೀಗ ಚಟುವಟಿಕೆಯ ಕೇಂದ್ರವಾಗಿ ಬದಲಾಗಿದೆ. ಬಿಜೆಪಿ ನಾಯಕರ ಮನೆಮನೆ ಓಡಾಟ ಹೆಚ್ಚಾಗಿದೆ. ಈ ಬೆಳವಣಿಗೆಗಳು ರಾಜ್ಯದಲ್ಲಿ ಮಹತ್ತರ ಬದಲಾವಣೆಯ ಬಗ್ಗೆ ಸುಳಿವು ನೀಡ್ತಿವೆ.
ಸಿಎಂ, ರಾಜ್ಯಾಧ್ಯಕ್ಷರ ಕುರ್ಚಿಗೆ ಬಂತಾ ಆಪತ್ತು..?
ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ಬಿಟ್ ಕಾಯಿನ್ ಹಗರಣದ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿವೆ. ಬಿಜೆಪಿ- ಕಾಂಗ್ರೆಸ್ ನಾಯಕರ ನಡುವೆ ಆರೋಪ- ಪ್ರತ್ಯಾರೋಪಗಳು ಮುಂದುವರಿದಿವೆ. ಆರೋಪಿ ಶ್ರೀಕಿ ಕೈಯಿಂದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಬಿಟ್ ಕಾಯಿನ್ ಹ್ಯಾಕ್ ಮಾಡಿಸಿದ್ದಾರೆಂದು ಕಾಂಗ್ರೆಸ್ ಬಲವಾಗಿ ಆರೋಪಿಸುತ್ತಿದೆ. ನೇರವಾಗಿ ಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷರ ಕುರ್ಚಿಗಳತ್ತಲೇ ಬೆರಳು ಮಾಡಿದೆ. ಹೀಗಾಗಿ, ಸಿಎಂ ಹಾಗೂ ರಾಜ್ಯಾಧ್ಯಕ್ಷರ ಕುರ್ಚಿಗಳು ಅಲುಗಾಡಲು ಶುರುವಾಗಿವೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಬಳಿ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಪುನರುಚ್ಚರಿಸಿದ್ದಾರೆ.
ಯಡಿಯೂರಪ್ಪ ಭೇಟಿ ಮಾಡಿದ ಜಗದೀಶ್ ಶೆಟ್ಟರ್..?
ಬಿಟ್ ಕಾಯಿನ್ ಹಗರಣ ಆರೋಪ ಕೇಳಿಬಂದ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನಿವಾಸದಲ್ಲಿ ಚಟುವಟಿಕೆಗಳು ಗರಿಗೆದರಿವೆ. ದೆಹಲಿಯಿಂದ ವಾಪಸ್ಸಾದ ಬಳಿಕ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬಿಎಸ್ ವೈ ನಿವಾಸಕ್ಕೆ ಭೇಟಿ ನೀಡಿ ಗುಪ್ತ ಮಾತುಕತೆ ನಡೆಸಿದ್ದಾರೆ. ಇದು ಹಲವಾರು ಸಂಶಯ ಹುಟ್ಟು ಹಾಕಿದೆ.
ಮತ್ತೊಂದೆಡೆ, ವಿಜಯಪುರದಲ್ಲಿ ರಮೇಶ್ ಜಾರಕಿಹೊಳಿ ಅವರು ಯತ್ನಾಳ್ ಭೇಟಿ ಮಾಡಿ ಚರ್ಚಿಸಿದ್ದಾರೆ. ಈ ಮಧ್ಯೆ, ಇಂದು ಸಿ.ಟಿ.ರವಿ ನಿವಾಸಕ್ಕೆ ಬಿಎಸ್ ವೈ ಆಪ್ತ ರೇಣುಕಾಚಾರ್ಯ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಇವರು ಯಾವ ವಿಚಾರದ ಬಗ್ಗೆ ಚರ್ಚೆಸಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಇಷ್ಟೆಲ್ಲಾ ಬೆಳವಣಿಗೆ ಮಧ್ಯೆ, ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಕಟೀಲ್ ಅವರನ್ನ ಸಚಿವ ಈಶ್ವರಪ್ಪ ಭೇಟಿ ಮಾಡಿ ಚರ್ಚಿಸಿದ್ದಾರೆ. ಇವೆಲ್ಲಾ ಬೆಳವಣಿಗೆ, ಸರ್ಕಾರ ಹಾಗೂ ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ನಡೆದಿವೆ ಎಂದರ್ಥ ಸೂಚಿಸುತ್ತಿವೆ.
ಸಿಎಂ ಪರವಾಗಿ ಸಮರ್ಥನೆಗೆ ನಿಂತ ಸಚಿವರು..!
ಇಲ್ಲಿಯವರೆಗೆ ನಮಗ್ಯಾಕೆ ಉಸಾಬರಿ ಎಂದು ಸೈಲೆಂಟಾಗಿದ್ದ ಸಚಿವರು ಇದೀಗ ಸಿಎಂ ಬೊಮ್ಮಾಯಿ ಸಮರ್ಥನೆಗೆ ನಿಂತಿದ್ದಾರೆ. ಇಂದು ಬೆಂಗಳೂರಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಸೋಮಣ್ಣ, ಸೋಮಣ್ಣ ಮತ್ತು ಆರ್.ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಿ. ಅದು ಬಿಟ್ಟು ಬುಟ್ಟಿಯಲ್ಲಿ ಹಾವಿದೇ ಹಾವಿದೆ ಅಂತ ಹೆದರಿಸಬೇಡಿ. ಅದ್ಯಾವ ಹಾವು ಇದೆ ಅನ್ನೋದನ್ನ ಹೊರಗೆ ಬಿಡಿ ಅಂತ ಸವಾಲು ಹಾಕಿದ್ದಾರೆ.
ಇದಕ್ಕೆ ಪ್ರತಿಯಾಗಿ ಏನೂ ಇಲ್ಲದೆ ಇದ್ದಿದ್ರೆ ನೀವು ಮೈಪರಚಿಕೊಳ್ಳೋದು ಯಾಕೆ? ಅಂತ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಬುಟ್ಟಿ ಇದೆ ಅನ್ನೋದು ಬಿಜೆಪಿಯವರಿಗೆ ಗೊತ್ತಾಯ್ತಲ್ಲ. ಬುಟ್ಟಿ ಇದ್ಮೇಲೆ ಹಾವು ಇರುತ್ತೆ ಅನ್ನೋದು ತಿಳಿದುಕೊಳ್ಳಿ ಅಂತ ತಿರುಗೇಟು ನೀಡಿದ್ದಾರೆ.