ರತ್ನಖಚಿತ ಸಿಂಹಾಸನದ ಮೇಲೆ ವಿರಾಜಿಸುವ ರಾಜ: ಖಾಸಗಿ ದರ್ಬಾರ್ನ ವೈಭವ ಹೆಚ್ಚಿಸುವ ಸಿಂಹಾಸನದ ಇತಿಹಾಸವೇ ರೋಚಕ!

ಮೈಸೂರು: ಮೈಸೂರು ಎಂದರೆ ತಟ್ಟನೆ ನಮ್ಮ ಕಣ್ಣು ಮುಂದೆ ಬರೋದು ವಿಶ್ವವಿಖ್ಯಾತ ಅರಮನೆ. ಇಡೀ ವೀಶ್ವದ ಪ್ರವಾಸಿಗರನ್ನು ತನ್ನ ಕೈಬಿಸಿ ಕರೆಯುತ್ತೆ ಈ ಅರಮನೆಯ ಸೊಬಗು. ಆದರೆ ಈ ಅರಮನೆಯ ಅಂದ, ಗಾಂಭೀರ್ತಯೆನ್ನು ಇಮ್ಮಡಿಗೊಳಿಸಿರುವುದು ಇಲ್ಲಿನ ಚಿನ್ನದ ಸಿಂಹಾಸನ ಹಾಗೂ ಅದರ ವಾಸ್ತು ವಿನ್ಯಾಸ. ಹಲವು ಶತಮಾನಗಳಿಂದ ಮೈಸೂರು ರಾಜ, ಮಹಾರಾಜರು ಅಲಂಕರಿಸಿರುವ ಈ ರತ್ನಖಚಿತ ಸಿಂಹಾಸನದ ಇತಿಹಾಸ ಅತ್ಯಂತ ರೋಚಕ.
ಈ ರತ್ನ ಸಿಂಹಾಸನ ಯಾವಾಗಲೂ ನೋಡಲು ಜನಸಾಮಾನ್ಯರಿಗೆ ಸಿಗುವುದಿಲ್ಲ. ದಸರಾ ಸಂದರ್ಭದಲ್ಲಿ ಮಾತ್ರ ದರ್ಶನ ಭಾಗ್ಯ ಲಭ್ಯ. ಬಿಡಿ ಬಿಡಿಯಾಗಿರುವ ಸಿಂಹಾಸನದ ಭಾಗಗಳನ್ನು ವರ್ಷಪೂರ್ತಿ ಭದ್ರತಾ ಕೊಠಡಿಯಲ್ಲಿ ಇರಿಸಲಾಗುತ್ತದೆ. ದಸರಾ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡುವ ಒಂದು ವಾರ ಮುನ್ನ ಭದ್ರತಾ ಕೊಠಡಿಯಿಂದ ಅವುಗಳನ್ನು ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಜವಂಶಸ್ಥರು, ಅರಮನೆ ಆಡಳಿತ ಮಂಡಳಿಯ ಅಧಿಕಾರಿಗಳ ಸಮ್ಮುಖದಲ್ಲಿ ಹೊರತೆಗೆಯಲಾಗುತ್ತದೆ. ನಂತರ ಸಾಂಪ್ರದಾಯಿಕವಾಗಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಜೋಡಣೆ ಕಾರ್ಯ ಪ್ರಾರಂಭಿಸಲಾಗುತ್ತದೆ.
ಬಿಗಿ ಭದ್ರತೆಯಲ್ಲಿ ಸಿಂಹಾಸನವನ್ನು ಜೋಡಿಸಲಾಗುತ್ತದೆ. ನಂತರ ದಸರಾ ಆರಂಭದ ಮೊದಲ ದಿನ ಸಂಪ್ರದಾಯದಂತೆ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ರಾಜವಂಶಸ್ಥರು ಆಸೀನರಾಗಿ ಖಾಸಗಿ ದರ್ಬಾರ್ ನಡೆಸುತ್ತಾರೆ. ಇದು ಒಂಬತ್ತು ದಿನ (ನವರಾತ್ರಿ) ನಡೆಯುತ್ತದೆ.
ಗೆಜ್ಜಗಳ್ಳಿ ಗ್ರಾಮದವರಿಂದ ಜೋಡಣೆ
ಅರಸರ ಕಾಲದಿಂದಲೂ ಮೈಸೂರು ತಾಲೂಕಿನ ಗೆಜ್ಜಗಳ್ಳಿ ಗ್ರಾಮದ ವೀರಶೈವ-ಲಿಂಗಾಯತ ಸಮುದಾಯದ 10-15 ಜನರ ತಂಡ ಪ್ರತಿವರ್ಷ ಸಿಂಹಾಸನವನ್ನು ಜೋಡಿಸುತ್ತಿದೆ. ಇದು ಇಂದಿಗೂ ಮುಂದುವರಿದುಕೊಂಡು ಬಂದಿದೆ.
ನವರಾತ್ರಿ ವೇಳೆ ಅರಮನೆಯಲ್ಲಿ ನಡೆಯುವ ಖಾಸಗಿ ದರ್ಬಾರ್‌ನಲ್ಲಿ ಸಿಂಹಾಸನವೇ ಕೇಂದ್ರ ಬಿಂದು. ಅಂಬಾವಿಲಾಸ ಅರಮನೆಯ ದರ್ಬಾರ್ ಹಾಲ್‌ನಲ್ಲಿ ಸಿಂಹಾಸನ ಜೋಡಣೆ ಪ್ರಾರಂಭವಾಗುತ್ತದೆ. ಗೆಜ್ಜಗಳ್ಳಿಯ ಸೋಮಾರಾಧ್ಯ, ವೀರಭದ್ರಪ್ಪ, ಅಂದಾನಪ್ಪ, ಮಹದೇವಪ್ಪ, ಮಲ್ಲೇಶ್, ಶಂಭುಲಿಂಗಪ್ಪ ಸೇರಿ 15 ಜನರು ಸಿಂಹಾಸನ ಜೋಡಣೆ ಕಾರ್ಯದಲ್ಲಿ ಭಾಗವಹಿಸುತ್ತಾರೆ.
ಸಾಂಕೇತಿಕವಾಗಿ ನವರಾತ್ರಿಯ ಮೊದಲ ದಿನದಂದು ಸಿಂಹಾಸನವನ್ನು ರಾಜವಂಶಸ್ಥರು ಏರುವ ಮುನ್ನ ‘ಸಿಂಹ’ವನ್ನು ಅಳವಡಿಸಲಾಗುತ್ತದೆ. ಅದೇ ರೀತಿ ಒಂಬತ್ತನೇ ದಿನ ಅಂದರೆ, ಆಯುಧಪೂಜೆ ದಿನ ದರ್ಬಾರ್ ಕೊನೆಯಾಗುತ್ತದೆ. ಅಂದು ಸಂಜೆ ದರ್ಬಾರ್ ಮುಗಿದ ನಂತರ ರಾಜವಂಶಸ್ಥರಿಂದ ಸಿಂಹಗಳ ವಿಸರ್ಜನೆ ನಡೆಸಲಾಗುತ್ತದೆ.
ರೋಚಕ ಇತಿಹಾಸವಿದೆ
ಇತಿಹಾಸದಲ್ಲಿ ದಾಖಲಾಗಿರುವ ಪ್ರಕಾರ ವಿಜಯನಗರ ಸಾಮ್ರಾಜ್ಯ ಪತನದ ನಂತರ 1610ರಲ್ಲಿ ವಿಜಯನಗರದ ಪ್ರತಿನಿಧಿಯಾಗಿದ್ದ ರಾಜ ಶ್ರೀರಂಗರಾಯ ಅದನ್ನು ಮೈಸೂರು ರಾಜರಿಗೆ ನೀಡಿದರು. ಈ ಸಿಂಹಾಸನದ ಮೇಲೆ ಕುಳಿತು ಹಲವು ಮಹಾರಾಜರು ಆಡಳಿತ ನಡೆಸಿದ್ದು. ನಂತರ ಮೈಸೂರು ಸಂಸ್ಥಾನ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ವಶವಾಗಿದ್ದರೂ, ಅವರು ಈ ಸಿಂಹಾಸನದ ಮೇಲೆ ಅವರು ಮೇಲೆ ಕುಳಿತುಕೊಳ್ಳಲಿಲ್ಲ ಎನ್ನಲಾಗಿದೆ. ಬ್ರಿಟಿಷರಿಂದ ಸಹಾಯದಿಂದ ಮತ್ತೆ ಮೈಸೂರನ್ನು ತಮ್ಮ ವಶಕ್ಕೆ ಪಡೆದ ಮುಮ್ಮಡಿ ಕೃಷ್ಣರಾಜ ಒಡೆಯರ್, ಅವರ ಪಟ್ಟಾಭಿಷೇಕ ನಂತರ ಸುವರ್ಣ ಸಿಂಹಾಸನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಯಿತು.
ಸಿಂಹಾಸನವನ್ನು ಅಂಜೂರದ ಮರದಿಂದ ಚಿನ್ನ ಮತ್ತು ಬೆಳ್ಳಿ ಲೇಪನದೊಂದಿಗೆ ಮಾಡಲಾಗಿದೆ. ಇದರ ರಾಯಲ್ ಸೀಟ್ ಅನ್ನು ಕೂರ್ಮಾಸಾನ ಎಂದು ಕರೆಯಲಾಗುತ್ತದೆ. ಅದರ ಮೇಲೆ ಕುಷನ್ ಮತ್ತು ದಿಂಬುಗಳನ್ನು ಅಮೂಲ್ಯವಾದ ಬಟ್ಟೆಗಳಿಂದ ಮುಚ್ಚಲಾಗುತ್ತದೆ.
ರಾಯಲ್ ಆಸನಕ್ಕೆ 7 ಹೆಜ್ಜೆಗಳಿವೆ. ಇದನ್ನು ಧರ್ಮಚಕ್ರ ಕಾಮ-ಮೋಕ್ಷವನ್ನು ಪುನರುಜ್ಜೀವನಗೊಳಿಸುವ 4 ಚಕ್ರಗಳಲ್ಲಿ ಇರಿಸಲಾಗಿದೆ. ಮಾರ್ಗಗಳ ಎರಡೂ ಬದಿಯಲ್ಲಿ ಸಾಲಭಂಜಿಕೆಯರು ಎಂದು ಕರೆಯುವ ಹೆಣ್ಣು ಗೊಂಬೆಗಳಿವೆ. ಆಸನದ ಹಿಂಭಾಗದಲ್ಲಿ ಸಿಂಹ ಮತ್ತು ಹೂವುಗಳ ಕಲಾಕೃತಿಯಿದೆ. ಮುಂಭಾಗದಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯಿದ್ದು, ಲಕ್ಷ್ಮೀ ಮತ್ತು ಸರಸ್ವತಿ ದೇವಿಯ ಚಿತ್ರಗಳು ಎರಡೂ ಬದಿಗಳಲ್ಲಿವೆ.
ರಾಜರ ಲಾಂಛನ ಗಂಡಭೇರುಂಡ:
ರಾಯಲ್ ಆಸನವನ್ನು ಕುದುರೆಗಳ ಜಿಗಿತದ ಭಂಗಿಯಲ್ಲಿ ಮಾಡಲಾಗಿದೆ. ಸಿಂಹಾಸನಕ್ಕೆ ಒಟ್ಟು 7 ಮೆಟ್ಟಿಲುಗಳನ್ನು ಅಳವಡಿಸಲಾಗಿದೆ. ಆಸನದ ದಕ್ಷಿಣ ಭಾಗದಲ್ಲಿ ಬ್ರಹ್ಮ ಭಗವಾನ್ ಅಲಂಕರಿಸಿದ್ದಾರೆ. ಉತ್ತರಕ್ಕೆ ಶಿವ ಮತ್ತು ಮಧ್ಯದಲ್ಲಿ ವಿಷ್ಣು ಸಿಂಹಗಳನ್ನು ವಿಜಯದ ಸಂಕೇತವಾಗಿ ಇರಿಸಲಾಗಿದೆ. 2 ಕುದುರೆ, 2 ಹುಲಿ ಮತ್ತು 4 ಹಂಸಗಳನ್ನು ಕೆತ್ತಲಾಗಿದೆ. ಹಿಂಬದಿ ಮೈಸೂರು ರಾಜರ ಲಾಂಛನವಾದ ಗಂಡಭೇರುಂಡವನ್ನು ಕೆತ್ತನೆ ಮಾಡಲಾಗಿದೆ. ಅದರ ಕೆಳಗೆ ಸತ್ಯಮೇವ ಧರಹಮ್ (ನಾನು ಯಾವಾಗಲೂ ಸತ್ಯವನ್ನು ಎತ್ತಿ ಹಿಡಿಯುತ್ತೇನೆ) ಎಂಬ ಉಲ್ಲೇಖವಿದೆ.
ರಾಯಲ್ ಆಸನ 2.25 ಮೀಟರ್ ಎತ್ತರವಿದ್ದು, ಅದರ ಮೇಲೆ ರಾಯಲ್ ಛತ್ರಿ ಇಡೀ ಸೀಟಿಗೆ ನೆರಳು ನೀಡುತ್ತದೆ. ಮೈಸೂರು ರಾಜನಿಗೆ ಆಶೀರ್ವಾದ ಎಂದು ಕೆತ್ತಿದ ಪದಗಳನ್ನು ಹೊಂದಿದೆ. ಮೇಲ್ಭಾಗದಲ್ಲಿ ಹುಮಾ ಎಂಬ ಆಕಾಶ ಹಕ್ಕಿ, ಅದರ ಕೊಕ್ಕಿನ ಮೇಲೆ ಪಚ್ಚೆ ರತ್ನವನ್ನು ಹೊಂದಿರುವ ಹಂಸವಿದೆ. ಪಕ್ಷಿಯ ನೆರಳಿನ ಆಧಾರದ ಮೇಲೆ ರಾಜ ಕಿರೀಟವನ್ನು ಧರಿಸುತ್ತಿದ್ದ ಎಂದು ನಂಬಲಾಗಿದೆ. ಸಿಂಹಾಸನದ ಎಂಟು ಭಾಗಗಳಲ್ಲಿ ಎಂಟು ಸಿಂಹಗಳು ನಿಂತಾಗ (ಅಳವಡಿಸಿದಾಗ) ರಾಜರ ಎಲ್ಲ ಸಂಪತ್ತು, ಆಸೆಗಳು ಈಡೇರುತ್ತವೆ ಎಂದು ಹೇಳಲಾಗುತ್ತದೆ.
ಒಟ್ಟಿನಲ್ಲಿ ದಸರಾ ಸಮಯದಲ್ಲಿ ಮಾತ್ರ ರಾಜದ ಖಾಸಗಿ ದರ್ಬಾರ್ ವೇಳೆ ಈ ರತ್ನಸಿಂಹಾಸನ ವೈಭವವನ್ನು ಜನಸಾಮಾನ್ಯರು ಕಣ್ತುಂಬಿಕೊಳ್ಳಬಹುದಾಗಿದೆ.