ಮೈಸೂರು-ಬೆಂಗಳೂರು ನಡುವಿನ ದಶಪಥ ಹೆದ್ದಾರಿ ಯೋಜನೆ ಯುಪಿಎ ಸರ್ಕಾರದ ಕೊಡುಗೆ: ಸಂಸದ ಪ್ರತಾಪ್ ಸಿಂಹಗೆ ವಿಶ್ವನಾಥ್ ತಿರುಗೇಟು!

ಮೈಸೂರು; ಆರಮನೆ ನಗರಿ ಮೈಸೂರು ಹಾಗೂ ಸಿಲಿಕಾನ್ ಸಿಟಿ ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸುವ ದಶಪಥ ಹೆದ್ದಾರಿ ಯೋಜನೆ ಯುಪಿಎ ಹಾಗೂ ಸಿದ್ದರಾಮಯ್ಯ ಸರ್ಕಾರದ ಕೊಡುಗೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ. ಈ ಮೂಲಕ ದಶಪಥ ಹೆದ್ದಾರಿ ಯೋಜನೆ ತಮ್ಮ ಕೊಡುಗೆ ಎಂದಿದ್ದ ತಮ್ಮದೇ ಪಕ್ಷದ ಸಂಸದ ಪ್ರತಾಪ್ ಸಿಂಹಗೆ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಹೆಚ್. ವಿಶ್ವನಾಥ್, ಮೈಸೂರು-ಬೆಂಗಳೂರು, ಬೆಂಗಳೂರು-ಮಡಿಕೇರಿ, ಮಡಿಕೇರಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಯೋಜನೆಗಳು ಅಂದಿನ ಯುಪಿಎ ಸರ್ಕಾರದ ಕೊಡುಗೆಗಳಾಗಿವೆ ಎಂದರು.
ಆಗ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಆ ಸಮಯದಲ್ಲಿ ಅನುಮೋದನೆ ಆಗಿರುವ ಯೋಜನೆಗಳನ್ನು ನಾನು ಮಾಡಿದೆ ಎಂದು ಸುಳ್ಳು ಹೇಳಬಾರದು ಎಂದು, ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿ ಕಾರಿದ್ದಾರೆ.
ಈ ಯೋಜನೆಗೆ ಸಂಸದ ಪ್ರತಾಪ್ ಸಿಂಹ ಯಾವುದೇ ಕೊಡುಗೆ ನೀಡಿಲ್ಲ. ಪ್ರತಾಪ್ ಸಿಂಹ ಹೊಸದಾಗಿ ಏನನ್ನಾದರೂ ಮಾಡಲಿ. ಸುಮ್ಮನೆ ಅನಾವಶ್ಯಕವಾಗಿ ಇದನ್ನು ನಾನು ಮಾಡಿದೆ ಎಂದು ಹೇಳಬಾರದು ಎಂದು ಟೀಕಿಸಿದರು.
ತಮ್ಮ ಪಕ್ಷದ ಸಂಸದರ ವಿರುದ್ಧ ನೇರ ವಾಗ್ದಾಳಿ ಮಾಡಿದ ಹಳ್ಳಿಹಕ್ಕಿ, ಮಿಸ್ಟರ್ ಪ್ರತಾಪ್ ಸಿಂಹ ದಶಪಥ ಯೋಜನೆ ನಿಮ್ಮದಲ್ಲ. ಇದು ನಾನು ಎಂಪಿ ಆಗಿದ್ದ ವೇಳೆ ಡಿಪಿಆರ್ ಆಗಿತ್ತು. ಆ ವೇಳೆ ನಾನು, ಧ್ರುವನಾರಾಯಣ್, ರಮ್ಯ, ಡಿ. ಕೆ. ಸುರೇಶ್ ಈ ಬಗ್ಗೆ ಸಭೆಗೆ ಹೋಗಿದ್ದೆವು. ಕೇಂದ್ರದಲ್ಲಿ ಕುಳಿತು ಈ ಬಗ್ಗೆ ಡಿಪಿಆರ್ ಫೈನಲ್ ಮಾಡಿಸಿದ್ದೇವೆ. ಆದರೆ ಈಗ ಬಂದು ನಾನು ಮಾಡಿದೆ ಅಂದರೆ ಹೇಗೆ?” ಎಂದು ಪ್ರಶ್ನಿಸಿದ ಅವರು, ಯೋಜನೆ ಜಾರಿ ಮಾಡಲು, ಅಂದಿನ ಲೋಕೋಪಯೋಗಿ ಸಚಿವರಾಗಿದ್ದ ಮಹದೇವಪ್ಪ ಹಾಗೂ ಸಿದ್ದರಾಮಯ್ಯ ಸರ್ಕಾರದ ಪಾತ್ರವು ಇದೆ ಎಂದು ಕಾಂಗ್ರೆಸ್ ನಾಯಕರ ಪರ ಬ್ಯಾಟ್ ಬೀಸಿದರು.