ಮೈಸೂರು ದಸರಾ ವೈಭವ; ನೋಡುವುದೇ ಒಂದು ವೈಭೋಗ!

 ಮೈಸೂರು ದಸರಾ ವೈಭವ; ನೋಡುವುದೇ ಒಂದು ವೈಭೋಗ!

ಮೈಸೂರು: ಮೈಸೂರು ದಸರಾ ಎಷ್ಟೋಂದು ಸುಂದರ..! ಸಾಂಸ್ಕೃತಿಕ ನಗರಿಯಲ್ಲಿ ನಡೆಯುವ ಕಾರ್ಯಕ್ರಮಗಳು, ಅರಮನೆಯಲ್ಲಿನ ಧಾರ್ಮಿಕ ಕಾರ್ಯಗಳು ಜನಸಾಮನ್ಯರಿಗೆ ಕುತೂಹಲದ ಗಣಿ. ತಿಳಿದಷ್ಟು ಮತ್ತು ತಿಳಿಯಬೇಕು ಅನ್ನೂ, ನೋಡಿದಷ್ಟು, ಮತ್ತೆ ಮತ್ತೆ ನೋಡಬೇಕು ಅನ್ನೂ ತವಕ. ದಸರಾ ವೈಭವವನ್ನು ನೋಡುವುದೇ ಒಂದು ವೈಭೋಗ. ದಸರಾ ಸಂಬಂಧಿಸಿದ ವಿಶೇಷ ಲೇಖನಗಳು.
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಮೈಸೂರನ್ನು ಸಿಂಗಾರಗೊಳಿಸಿ, ಸಹಸ್ರಾರು ಸಾಮಾನ್ಯ ಜನರು ನಗರದಲ್ಲಿ ಸುತ್ತಾಡಿ, ಸಂಭ್ರಮಿಸುವುದು ಒಂದೆಡೆಯಾದರೆ, ಮತ್ತೊಂದೆಡೆ ರಾಜವಂಶಸ್ಥರು ಅರಮನೆಯೊಳಗೆ ಶಾಸ್ತ್ರೋಕ್ತವಾಗಿ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿ, ಖಾಸಗಿ ದರ್ಬಾರ್ ನಡೆಸುವರು…!
ಶತಮಾನಗಳಿಂದ ಅರಮನೆಯಲ್ಲಿ ನವರಾತ್ರಿ ಸಂದರ್ಭದಲ್ಲಿ ನಡೆದು ಬಂದ ಧಾರ್ಮಿಕ ಆಚರಣೆಗಳನ್ನು ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ.
ವಿಜಯನಗರ ಸಾಮ್ರಾಝ್ಯ ಕಾಲದಲ್ಲಿ ಆರಂಭವಾದ ವಿಜಯದಶಮಿ ನಂತರ ಮೈಸೂರು ರಾಜವಂಶಸ್ಥರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈಗ ರಾಜವಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪೂರ್ವಜರು ಹಾಕಿಕೊಟ್ಟ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದು, ನವರಾತ್ರಿಯ 9 ದಿನವೂ ಒಂದೊಂದು ಶಕ್ತಿ ದೇವತೆಯನ್ನು ಪೂಜಿಸಲಾಗುತ್ತದೆ.
ನವರಾತ್ರಿ ಮೊದಲ ದಿನ ಪಾಡ್ಯದಂದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳಗ್ಗೆ ಎದ್ದ ತಕ್ಷಣ ಅವರಿಗೆ ಆರತಿ ಎತ್ತಿ, ಎಣ್ಣೆ ಶಾಸ್ತ್ರ ಮಾಡಲಾಗುತ್ತದೆ. ನಂತರ ಮಂಗಳಸ್ನಾನ. ಮುತ್ತೈದೆಯರು ಮತ್ತು ಪುರೋಹಿತ ಮನೆತನದ ಹೆಂಗಸರು ಒಡೆಯರಿಗೆ ಆರತಿ ಬೆಳಗುವರು. ಇದಾದ ಮೇಲೆ ಪೂಜೆಗೆ ಅಣಿಯಾಗುವ ಯದುವೀರ್ ಅವರು ಮೊದಲಿಗೆ ಚಾಮುಂಡಿ ತೊಟ್ಟಿಯಲ್ಲಿ ಗಣಪತಿಗೆ ಪೂಜೆ ನೆರವೇರಿಸುವರು.

ನಾಡ ದೇವತೆ ಚಾಮುಂಡಿ ಸನ್ನಿಧಿಯಲ್ಲಿ ಕಂಕಣ ಧಾರಣೆ:
ಕಳಸ ಪೂಜೆ ಮುಗಿಸಿ ಯದುವೀರ್ ಅವರು ತಮ್ಮ ಕುಲದೇವತೆ ಚಾಮುಂಡಿ ಸನ್ನಿಧಿಯಲ್ಲಿ ಕಂಕಣ ಧರಿಸುತ್ತಾರೆ. ಪತ್ನಿ ತ್ರಿಷಿಕಾ ಕುಮಾರಿ, ರಾಜಮಾತೆ ಪ್ರಮೋದಾದೇವಿ ಒಡೆಯರ್ ಸಹ ಪಾರಂಪರಿಕವಾಗಿ ಬಂದ ಪದ್ಧತಿಯಂತೆ ಮಹಾರಾಣಿ ಸ್ಥಾನದಲ್ಲಿ ನಿಂತು ಕಂಕಣ ಧಾರಣೆ ವೇಳೆ ಉಪಸ್ಥಿತರಿರುತ್ತಾರೆ. ಅಲ್ಲಿಂದ ಎಲ್ಲ ರೀತಿಯ ಕಠಿಣ ವ್ರತಗಳು ಸಂಪ್ರದಾಯದಂತೆ ನಡೆಯುತ್ತದೆ.

ಮೈಸೂರು ಅರಮನೆಯಲ್ಲಿ ಪೂಜಾ ಕಾರ್ಯ:
ಚಂಡಿಕಾ ಹೋಮ, ಬಲಿ, ಮಹಿಷ ವಧೆ, ಶಮಿ ವೃಕ್ಷ ಪೂಜೆ ಸೇರಿದಂತೆ ಹಲವು ಪೂಜಾವಿಧಿಗಳು ಜರುಗುತ್ತವೆ. ಜಪ, ಪಾರಾಯಣ, ವೇದ ಪಾರಾಯಣ ಕನ್ನಡಿತೊಟ್ಟಿಯಲ್ಲಿ ಆರಂಭವಾಗುತ್ತವೆ. ದೇವಿ ಭಾಗವತ ಪಾರಾಯಣ ಮಾಡುವಾಗ ಮಹಿಷಾಸುರನನ್ನು ಸಾಂಕೇತಿಕವಾಗಿ ಸಂಹರಿಸಲಾಗುತ್ತದೆ. ಇದಕ್ಕೆ ಮರದಿಂದ ಮಹಿಷನ ಪ್ರತಿಕೃತಿ ಸಿದ್ಧಪಡಿಸಿ ಅದಕ್ಕೆ ಕುಂಕುಮದ ರಕ್ತವರ್ಣ ಹಾಕಲಾಗುತ್ತದೆ.
ಕಾಳಿಕಾಪುರಾಣ ರೀತ್ಯ ವೈದಿಕವಾಗಿ ಅರಮನೆಯೊಳಗೆ ಕಾರ್ಯಕ್ರಮ ನಡೆಸುವ ಮುಂಚೆ ಬೆಳಗ್ಗೆ ರತ್ನಖಚಿತ ಸಿಂಹಾಸನಕ್ಕೂ ಪೂಜೆಯಾಗುತ್ತದೆ. ಈ ಮಧ್ಯೆ ಯದುವೀರ್ ದಂಪತಿಗೆ ದಂಪತಿಪೂಜೆ ಮಾಡಲಾಗುತ್ತದೆ. ಹಾಗೆಯೇ ಖಾಸಗಿ ದರ್ಬಾರ್‌ಗೆ ಬರುವುದಕ್ಕೆ ಮುನ್ನ ತ್ರಿಷಿಕಾ ಕುಮಾರಿ ಅವರು ಸುಮಂಗಲಿಯರೊಡಗೂಡಿ ಯದುವೀರ್ ಅವರ ಪಾದಪೂಜೆ ಮಾಡಿ ಹಣೆಗೆ ತಿಲಕ ಇಡುತ್ತಾರೆ.
ಹತ್ತು ದಿನವೂ ಒಡೆಯರ್‌ಗೆ ಈ ರೀತಿ ಪಾದಪೂಜೆ ಮಾಡಲಾಗುತ್ತದೆ. ಇದು ಅರಮನೆಯ ಕಲ್ಯಾಣ ಮಂಟಪದ ಮೇಲ್ಭಾಗದಲ್ಲಿ ನೆರವೇರುತ್ತದೆ.
ಈ ಎಲ್ಲ ವಿಧದ ಪೂಜೆಗಳ ಜತೆ ವಿವಿಧ ಬಗೆಯ ದಂತದ ಗೊಂಬೆಗಳನ್ನು ಗೊಂಬೆ ತೊಟ್ಟಿಯಲ್ಲಿ ಕೂರಿಸಿ ಆರತಿ ಮಾಡಲಾಗುತ್ತದೆ. ಸಪ್ತಮಿ ದಿನದಂದು ಕನ್ನಡಿತೊಟ್ಟಿಯಲ್ಲಿ ಸರಸ್ವತಿ ಪೂಜೆ ಅಂಗವಾಗಿ ಪುಸ್ತಕ, ಓಲೆಗರಿ ಗ್ರಂಥಗಳಿಗೆ ಪೂಜೆ, ಧೂಪ ದೀಪ ಮಂಗಳಾರತಿ, ಐವರು ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಹೂವು, ಹಣ್ಣು ಕಾಯಿ ಕಾಣಿಕೆ ನೀಡಲಾಗುತ್ತದೆ. ಅಂತಃಪುರದಲ್ಲಿ ಸರಸ್ವತಿ ಪೂಜೆಯನ್ನು ರಾಣಿ ವಾಸದವರು ಮಾಡುವರು.
ಸಪ್ತಮಿ-ಅಷ್ಟಮಿಯಂದು ಕಾಳರಾತ್ರಿ ಪೂಜೆ, ಬೆಟ್ಟಕ್ಕೆ, ಗದ್ದಿಗೆಯಮ್ಮನಿಗೆ ಕಾಣಿಕೆ ಕಾಯಿ, ಹಣ್ಣು ಕಳಸಿಕೊಡಲಾಗುತ್ತದೆ. ದುರ್ಗಾಷ್ಟಮಿ ದಿನ ಚಾಮುಂಡಿ ತೊಟ್ಟಿಯಲ್ಲಿ ಪೂಜೆ. ಮುತ್ತೈದೆ, ಸುವಾಸಿನಿಯರಿಗೆ ಅರಿಶಿನ, ಕುಂಕುಮ, ಕಾಣಿಕೆ ನೀಡಲಾಗುವುದು.

ಯದುವೀರ್ ರವರ ಖಾಸಗಿ ದರ್ಬಾರ್:
ಪ್ರತಿದಿನ ಖಾಸಗಿ ದರ್ಬಾರ್ ನಡೆಯುವ ಮುನ್ನ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆಗೆ ಅಲಂಕಾರ ಮಾಡಿ ಅರಮನೆ ಆವರಣದಲ್ಲಿರುವ ಕೋಟೆ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಅರಮನೆಯೊಳಗೆ ಇವುಗಳ ಪ್ರವೇಶದ ನಂತರವೇ ಖಾಸಗಿ ದರ್ಬಾರ್ ಪ್ರಾರಂಭ. ರತ್ನ ಖಚಿತ ಸಿಂಹಾಸನದಲ್ಲಿ ಆಸೀನರಾಗುವ ಯದುವೀರ್ ಅವರಿಗೆ ಪುರೋಹಿತರು ಪ್ರಸಾದ, ಮಂತ್ರ ಪುಷ್ಪ ಹಾಗೂ ಮಂಗಳಾಕ್ಷತೆ ನೀಡುತ್ತಾರೆ. ಖಾಸಗಿ ದರ್ಬಾರ್‌ಗೆ ಆಹ್ವಾನಿತರು, ರಾಜವಂಶಸ್ಥರು, ಪುರೋಹಿತರು ಮಾತ್ರ ಭಾಗವಹಿಸುತ್ತಾರೆ.
ವಿಜಯ ದಶಮಿಯ 10 ದಿನದ ಅವಧಿಯಲ್ಲಿ 108 ಸಲ ದೇವಿ ಭಾಗವತ ಪಠಣ, 10 ಜನ ವೇದಮೂರ್ತಿಗಳಿಂದ ಸಪ್ತಶತಿ ಪಠಣ, ನವಮಿ ರಾತ್ರಿ ಅಲಮೇಲಮ್ಮನ ಪೂಜೆ, ಆಯುಧಶಾಲೆಯಲ್ಲಿ ಆಯುಧ ಪೂಜೆ, ವಿಜಯ ದಶಮಿಯಂದು ಶಮೀಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು  ಶಾಸ್ತ್ರೋಕ್ತವಾಗಿ ನಡೆಯುತ್ತವೆ.

ಅರಮನೆಯಲ್ಲಿ ವಿಶೇಷ ಆಯುಧಪೂಜೆ:
ಅರಮನೆಯಲ್ಲಿ ಆಯುಧ ಪೂಜೆ, ವಿಜಯದಶಮಿಯ ಕಾರ್ಯಕ್ರಮಗಳು ಮಹತ್ವ ಪಡೆದುಕೊಂಡಿದ್ದು, 9 ದಿನಗಳ ಕಾರ್ಯಕ್ರಮದಲ್ಲಿ ಹಿಂದಿನ ದಿನಗಳಲ್ಲಿ ವಿವಿಧ ದೇವತಾ ಕಾರ್ಯ ನಡೆದರೆ ಆಯುಧ ಪೂಜೆಯಂದು ನಾನಾ ಕಾರ್ಯಕ್ರಮಗಳು ಜರುಗಲಿವೆ.
ಮುಂಜಾನೆ ಚಂಡಿ ಹೋಮದೊಂದಿಗೆ ಧಾರ್ಮಿಕ ಕಾರ್ಯಗಳು ಆರಂಭಗೊಳ್ಳಲಿದ್ದು, ರಾಜವಂಶಸ್ಥ ಯದುವೀರ ಅವರು ಹೋಮ ಪೂರೈಸಲಿದ್ದಾರೆ. ಬಳಿಕ ಅರಮನೆಯ ಆನೆ ಬಾಗಿಲಿನಲ್ಲಿ ಪಟ್ಟದ ಆನೆ, ಪಟ್ಟದ ಕುದುರೆ ಮತ್ತು ಪಟ್ಟದ ಹಸು, ಅರಮನೆ, ರಾಜವಂಶಸ್ಥರ ವಾಹನಗಳು, ಶಸ್ತ್ರಾಸತ್ತಗಳಿಗೆ ಪೂಜೆ ನೆರವೇರಿಸಲಾಗುತ್ತದೆ.
ಬಳಿಕ ಅಂಬಾವಿಲಾಸ ದರ್ಬಾರ್ ಹಾಲ್‌ನಲ್ಲಿ ಯದುವೀರ್ ಅವರು ಈ ವರ್ಷದ ಕೊನೆದಿನದ ಖಾಸಗಿ ದರ್ಬಾರ್ ನೆರವೇರಿಸಲಿದ್ದಾರೆ. ನಂತರ 9 ದಿನಗಳು ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಗಳ ವಿಸರ್ಜನೆ ನೆರವೇರಲಿದೆ. 9 ದಿನಗಳು ಚಿನ್ನದ ಕಂಕಣಧಾರಿಯಾಗಿ ದಸರಾ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸುವ ಯದುವೀರ್ ಅವರು, ಅರಮನೆಯ ಖಾಸಾ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಹಾಗೂ ವಾಣಿ ವಿಲಾಸ ದೇವರ ಮನೆಯಲ್ಲಿ ಮತ್ತೊಂದು ಕಂಕಣ ವಿಸರ್ಜನೆ ನೆರವೇರಲಿದೆ. ಬಳಿಕ ಆರಮನೆಯಲ್ಲಿಯೇ ಇರುವ ಶ್ರೀ ಅಲಮೇಲಮ್ಮನ ದರ್ಶನ ಪಡೆದು ಪೂಜೆ ಸಲ್ಲಿಸಲಾಗತ್ತದೆ. ಸಂಜೆ ಅರಮನೆಯಲ್ಲಿ ವಿಶೇಷ ಪೂಜೆ ನೆರವೇರಲಿದೆ.

ಆಯುಧ ಪೂಜೆ ನಂತರ ವಿಜಯದಶಮಿ:
ವಿಜಯದಶಮಿ ದಿನದಂದು ಯದುವೀರ್ ಅವರು ಶುಚಿರ್ಭೂತರಾಗಿ ಹಿಂದಿನ ದಿನ ಪೂಜೆ ಮಾಡಿದ್ದ ಪಟ್ಟದ ಕತ್ತಿಗೆ ಉತ್ತರ ಪೂಜೆ ಮಾಡಿದ ನಂತರ  ಅದರ ಎದುರು ಜಟ್ಟಿಗಳಿಂದ ವಜ್ರಮುಷ್ಟಿ ಕಾಳಗ ನಡೆಯುತ್ತದೆ. ಬಳಿಕ ಅರಮನೆ ಉತ್ತರ ದ್ವಾರದ ಬಳಿ ಇರುವ ಶ್ರೀಭುವನೇಶ್ವರಿ ಅಮ್ಮನ ದೇವಸ್ಥಾನಕ್ಕೆ ಖಾಸ ಆಯುಧಗಳನ್ನು ಕಳುಹಿಸಿದ ಬಳಿಕ ರಾಜವಂಶಸ್ಥ ಯದುವೀರ ಅವರು ಬೆಳ್ಳಿರಥದಲ್ಲಿ ಮಂಗಳವಾದ್ಯದೊಂದಿಗೆ ವಿಜಯಯಾತ್ರೆ ತೆರಳುತ್ತಾರೆ.
ದೇವಸ್ಥಾನದ ಆವರಣದಲ್ಲಿ ಇರುವ ಶಮಿ (ಬನ್ನಿ) ವೃಕ್ಷಕ್ಕೆ ವಿಶೇಷ ಪೂಜೆ ನೆರವೇರಿಸುತ್ತಾರೆ.  ವಿಜಯಯಾತ್ರೆ, ವಿಶೇಷ ಪೂಜೆ ಬಳಿಕ ವಾಪಸ್ ಅರಮನೆಗೆ ಬಂದು ಅಂಬಾವಿಲಾಸ ಅರಮನೆಯಲ್ಲಿರುವ ಶ್ರೀಚಾಮುಂಡೇಶ್ವರಿ ಅಮ್ಮನ ಕನ್ನಡಿ ತೊಟ್ಟಿಯಲ್ಲಿ ಪೂಜೆ ಮಾಡುವ ಮೂಲಕ ಈ ವರ್ಷದ ದಸರಾ ಮಹೋತ್ಸವ ಮುಕ್ತಾಯಗೊಳ್ಳುತ್ತದೆ.
ಈ ಎಲ್ಲ ಪೂಜಾ ಕಾರ್ಯಗಳು ಮುಗಿದ ಬಳಿಕ ಚಾಮುಂಡಿಬೆಟ್ಟದಿಂದ ದೇವಿಯ ಉತ್ಸವ ಮೂರ್ತಿಯನ್ನು ಅರಮನೆಗೆ ತಂದು ಪೂಜೆ ಸಲ್ಲಿಸಿ, ಚಿನ್ನದ ಅಂಬಾರಿ ಮೇಲೆ ಪ್ರತಿಷ್ಠಾಪಿಸಲಾಗುತ್ತದೆ. ಇದಾದ ಬಳಿಕ ಅಂಬಾರಿಯನ್ನು ಅರ್ಜುನನಿಗೆ ಹೊರಿಸಿ ಸಾಂಸ್ಕೃತಿ ಕಲಾ ತಂಡಗಳೊಂದಿಗೆ ದಸರಾ ಮಹೋತ್ಸದ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ದಸರಾ ಮಹೋತ್ಸದ ಕೊನೆಯಲ್ಲಿ ನಡೆಯುವ ಈ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಇಡೀ ನಾಡಿನ ಜನ ಅಷ್ಟೇ ಅಲ್ಲದೆ ವಿದೇಶಿಯರು ಸಹ ತುದಿಗಾಲಿನಲ್ಲಿ ನಿಂತಿರುತ್ತಾರೆ. ಚಿನ್ನದ ಅಂಬಾರಿ ಮೇಲೆ ನಾಡ ದೇವತೆಯನ್ನು ಹೊತ್ತು ನಡೆಯುವ ಗಜರಾಜನ ಗಾಂಭೀರ್ಯದ ಈ ಮೆರವಣಿಗೆ, ಕಲಾತಂಡಗಳ ಕಲಾಪ್ರದರ್ಶನವನ್ನು ನೋಡುವುದೇ ಒಂದು ವೈಭೋಗ.