ಮುಖ್ಯ ಸಲಹೆಗಾರನ ಹುದ್ದೆಗೆ ಪ್ರಶಾಂತ್ ಕಿಶೋರ್ ರಾಜಿನಾಮೆ; ಏಕಾಂಗಿಯಾದರೇ ಪಂಜಾಬಿನ ಕ್ಯಾಪ್ಟನ್ ಸಿಂಗ್
ಸಿಧು ನೇಮಕಾತಿಯ ವಿಷಯದಲ್ಲೇ ಕ್ಯಾಪ್ಟನ್ ತಗಾದೆ ತೆಗೆದಿದ್ದರು, ಈಗ ಕಿಶೋರ್ ರಾಜಿನಾಮೆಯಿಂದ ರಾಜ್ಯ ರಾಜಕಾರಣದಲ್ಲಿ ಕ್ಯಾಪ್ಟನ್ ಸಂಪೂರ್ಣವಾಗಿ ಏಕಾಂಗಿಯಾಗಬಹುದು ಎಂದು ಸೂಚಿಸುತ್ತದೆ ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಕ್ರಮೇಣ ಕಾಂಗ್ರೆಸ್ ಹೈಕಮಾಂಡ್ ಜೊತೆಗಿನ ಸಂಬಂಧ, ವಿಷಯಗಳಿಂದ ಪ್ರತ್ಯೇಕವಾಗಿರುವುದನ್ನು ಕಂಡುಕೊಂಡಿದ್ದಾರೆಯೇ? ಏಕೆಂದರೆ ಇತ್ತೀಚಿನ ಬೆಳವಣಿಗೆಯಲ್ಲಿ ಸದಾ ಹಿನ್ನಡೆಯನ್ನೇ ಅನುಭವಿಸುತ್ತಿರುವ ಕ್ಯಾಪ್ಟನ್ ಮಂಕಾಗಿದ್ದಾರೆಯೇ? ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಪ್ರಶಾಂತ್ ಕಿಶೋರ್ ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರರಾಗಿ ರಾಜೀನಾಮೆ ನೀಡಿರುವುದು ಸಹ ಸಿಂಗ್ ಅವರಿಗೆ ಉಂಟಾಗಿರುವ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಕಿಶೋರ್ ಅವರು ಅಮರೀಂದರ್ ಅವರಿಗೆ ಗುರುವಾರ ಪತ್ರವೊಂದನ್ನು ಬರೆದಿದ್ದು, ಅದರಲ್ಲಿ ಅವರು “ಸಕ್ರಿಯ ರಾಜಕೀಯದಿಂದ ತಾತ್ಕಾಲಿಕ ವಿರಾಮ ತೆಗೆದುಕೊಳ್ಳುತ್ತಿರುವ ಕಾರಣ” ಸಲಹೆಗಾರನ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ.
2017 ರ ವಿಧಾನಸಭಾ ಚುನಾವಣೆಯಲ್ಲಿ ಅಮರೀಂದರ್ ಗೆಲುವಿನ ಹಿಂದೆ ಇದ್ದಿದ್ದು ಇದೇ ಕಿಶೋರ್ ಅವರ ಯಶಸ್ವಿ ಮಾರ್ಗದರ್ಶನ, ಏಕೆಂದರೆ ಆಮ್ ಆದ್ಮಿ ಪಕ್ಷದ (ಎಎಪಿ) ಉದಯದೊಂದಿಗೆ ಕಠಿಣ ರಾಜಕೀಯ ಕದನ ಪಂಜಾಬ್ನಲ್ಲಿ ಉಂಟಾಗಿತ್ತು, ಈ ವೇಳೆ ಕ್ಯಾಪ್ಟನ್ ಕೈ ಹಿಡಿದ ಕಿಶೋರ್ಅವರನ್ನು “ಪಂಜಾಬಿನ ಕ್ಯಾಪ್ಟನ್” ಎಂದು ಕರೆದರು. ಇದೇ ಅವರ ಗೆಲುವಿಗೆ ಕಾರಣವಾಯಿತು ಎಂದು ಹೇಳಲಾಗಿದೆ. ಕೆಲವು ತಿಂಗಳ ಹಿಂದೆ, ಕಿಶೋರ್ ಅವರು 2022 ರಾಜ್ಯ ಚುನಾವಣೆ ಹತ್ತಿರವಿರುವ ಕಾರಣ ಮತ್ತೊಮ್ಮೆ ಸಲಹೆಗಾರನ ಪಾತ್ರವನ್ನು ವಹಿಸಿಕೊಳ್ಳುವಂತೆ ಕೇಳಲಾಗಿತ್ತು.
ಆದರೆ ಕಿಶೋರ್ ರಾಜೀನಾಮೆ ಕೊಟ್ಟ ಕಅರಣದಿಂದ ಪಂಜಾಬ್ ಕಾಂಗ್ರೆಸ್‌ನಲ್ಲಿ ಸಿಎಂ ಈಗ ಹೆಚ್ಚು ಏಕಾಂಗಿಯಾಗುತ್ತಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ. ಪಂಜಾಬ್ ಕಾಂಗ್ರೆಸ್ ನ ಅಧ್ಯಕ್ಷಗಿರಿಯನ್ನು ನವಜೋತ್ ಸಿಂಗ್ ಸಿಧುಗೆ ವಹಿಸಿದ ಕೆಲ ದಿನಗಳ ನಂತರ ಕಿಶೋರ್ ರಾಜೀನಾಮೆ ನೀಡಿದ್ದಾರೆ. ಸಿಧು ಅವರ ಔಪಚಾರಿಕ ನೇಮಕಾತಿಗೆ ಮುಂಚೆಯೇ, ಕಿಶೋರ್ ಸಿಧು ಜೊತೆ ನೇರ ಸಂಪರ್ಕದಲ್ಲಿದ್ದರು ಎಂದು ಉನ್ನತ ಮೂಲಗಳು ಬಹಿರಂಗಪಡಿಸಿವೆ.
“ಸಿಧು ನೇಮಕಾತಿಯ ವಿಷಯದಲ್ಲೇ ಕ್ಯಾಪ್ಟನ್ ತಗಾದೆ ತೆಗೆದಿದ್ದರು, ಈಗ ಕಿಶೋರ್ ರಾಜಿನಾಮೆಯಿಂದ ರಾಜ್ಯ ರಾಜಕಾರಣದಲ್ಲಿ ಕ್ಯಾಪ್ಟನ್ ಸಂಪೂರ್ಣವಾಗಿ ಏಕಾಂಗಿಯಾಗಬಹುದು ಎಂದು ಸೂಚಿಸುತ್ತದೆ “ಎಂದು ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಇದು ಪಕ್ಷದ ವ್ಯವಹಾರಗಳಲ್ಲಿ ಅಮರೀಂದರ್ ಅವರ ಪ್ರಭಾವ ಈ ಘಟನೆಗಳಿಂದ ಕಡಿಮೆಯಾಗುತ್ತಿದೆ ಮತ್ತು ಮುಂಬರುವ ವಿಧಾನಸಭಾ ಚುನಾವಣೆಯ ಟಿಕೆಟ್ ವಿತರಣೆಯಲ್ಲಿ ಇವರ ಕೈಚಳಕ ನಡೆಯದೇ ಇರಬಹುದು ಎಂದು ಹೇಳಬಹುದು. “ಮೇಲ್ನೋಟಕ್ಕೆ, ಪಕ್ಷದ ಹೈಕಮಾಂಡ್ ಮೇಲೆ ಸಿಧು ಹೆಚ್ಚು ಹಿಡಿತ ಹೊಂದಿದ್ದಾರೆ ಮತ್ತು ಕಿಶೋರ್ ನಂತಹ ಹಳೆಯ ಸಹವರ್ತಿಗಳು ಕ್ಯಾಪ್ಟನ್ ಅವರನ್ನು ದೂರವಿಡುತ್ತಿದ್ದಾರೆ ಎಂದು ತೋರುತ್ತದೆ. ಅಂತಿಮವಾಗಿ, ಇದು ಟಿಕೆಟ್ ವಿತರಣೆಯಲ್ಲಿ ಪ್ರತಿಫಲಿಸುತ್ತದೆ, ”ಎಂದು ಮಾಲ್ವಾದ ನಾಯಕ ಹೇಳಿದರು.