ಮಾಲೂರು ಸರ್ಕಾರಿ ಶಾಲೆಗಳಿಗೆ ಹೊಸ ಮೆರುಗು ನೀಡಿದ ನರೇಗಾ

ಕೋಲಾರ: ನರೇಗಾ ನೆರವಿನಿಂದ ಮಾಲೂರು ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ಸಿಕ್ಕಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಈ ಹಿಂದೆ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡುವುದರ ಜೊತೆಗೆ ಗ್ರಾಮೀಣ ಪ್ರದೇಶದಲ್ಲಿ ಮೂಲಸೌಕರ್ಯ ನಿರ್ಮಿಸಲಾಗುತ್ತಿತ್ತು. ಆದರೆ ಈಗ ಸರ್ಕಾರಿ, ಶಾಲೆ ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ನರೇಗಾ ಅನುದಾನ ಬಳಸಿ, ಮಾದರಿ ಶಾಲೆ, ಅಂಗನವಾಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳಾದ ಉಕೇಶ್ ಕುಮಾರ್, ಸೂಚನೆಯಂತೆ ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಸಬಲೀಕರಣ, ಅಂಗನವಾಡಿ ಕೇಂದ್ರಗಳ ಮಕ್ಕಳ ಸ್ನೇಹಿ ಮಾಡಲು ಕ್ರಮವಹಿಸಲಾಗಿದೆ. ಶಾಲೆ-ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ನಿರ್ಮಾಣಕ್ಕೆ ನರೇಗಾ ಅನುದಾನ ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿದೆ. ನರೇಗಾದಡಿ, ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್, ಅಡುಗೆ ಕೋಣೆ, ಶೌಚಾಲಯ, ಬಚ್ಚಲುಗುಂಡಿ, ಆಟದ ಮೈದಾನ, ಮಳೆನೀರುಕೊಯ್ಲು, ಪೌಷ್ಠಿಕತೋಟ, ಅಂಗನವಾಡಿ ಕೇಂದ್ರ ನಿರ್ಮಾಣ, ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ತಾಲ್ಲೂಕಿನ 28 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ನರೇಗಾದಡಿ 67 ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 36 ಶಾಲೆಗಳಿಗೆ ಶೌಚಾಲಯ, 26 ಅಡುಗೆಕೋಣೆ, 25 ಶಾಲೆಗಳಲ್ಲಿ ಆಟದ ಮೈದಾನ, 45 ಮಳೆನೀರು ಕೊಯ್ಲು, 8 ಅಂಗನವಾಡಿ ಕೇಂದ್ರಗಳು ಹಾಗೂ 7 ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯ ನಿರ್ಮಾಣ ಹಾಗೂ ಬಚ್ಚಲುಗುಂಡಿ, ಪೌಷ್ಠಿಕ ತೋಟ ಕಾಮಗಾರಿಗಳು ಪ್ರಗತಿಯಲ್ಲಿವೆ.
ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ
ಈ ಹಿಂದೆ ಶಾಲೆಗಳಿಗೆ ತಡೆಗೋಡೆಗಳಿಲ್ಲದೆ, ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದವು. ಇದನ್ನು ತಡೆಯಲು ಎಲ್ಲಾ ಶಾಲೆಗಳಿಗೆ ಸುಸಜ್ಜಿತ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ಹಲವು ಕಾಂಪೌಂಡ್ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಆಕರ್ಷಕವಾಗಿ ಮಕ್ಕಳ ಸ್ನೇಹಿ ಚಿತ್ರಗಳನ್ನು ಚಿತ್ರಸಲಾಗಿದೆ. ಶಾಲಾ ಕಾಂಪೌಂಡ್ ಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಆಕರ್ಶಕ ಗೋಡೆಬರಹಗಳು, ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುತ್ತಿವೆ.
ಹಳ್ಳಿ ಶಾಲೆಗೆ ಸುಸಜ್ಜಿತ ಆಟದ ಮೈದಾನ
ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಆಟದ ಮೈದಾನಗಳು, ಈಗ ನರೇಗಾದಿಂದ ಹಳ್ಳಿಗಳಲ್ಲೂ ನಿರ್ಮಾಣವಾಗುತ್ತಿವೆ. ಉದ್ಯೋಗ ಖಾತರಿಯಡಿ 25 ಆಟದ ಮೈದಾನಗಳನ್ನು ನಿರ್ಮಿಸಲಾಗುತ್ತಿದೆ. ಕಬ್ಬಡಿ, ಕೋಕೊ, ಬ್ಯಾಸ್ಕೆಟ್ಬಾಲ್ ಕೋರ್ಟ್, ರನ್ವೇ ಟ್ರಾಕ್ ನಿರ್ಮಾಣ ಮಾಡಲಾಗುತ್ತಿದೆ. ಶಿವಾರಪಟ್ಟಣ ಪ್ರೌಡಶಾಲೆ ಹಾಗೂ ದೊಡ್ಡನಾಯಕನಯಹಳ್ಳಿ ಪ್ರೌಡಶಾಲೆ ಹಾಗೂ ರಾಜೇನಹಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಾದರಿ ರನ್ವೇ ಟ್ರಾಕ್ಗಳನ್ನು ನಿರ್ಮಿಸಲಾಗುತ್ತಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ನರೆಗಾ ನೆರವಾಗುತ್ತಿದೆ.
ಮೂಲ ಸೌಕರ್ಯಗಳಿಲ್ಲದೆ ಸೋರಗಿದ್ದ ಸರ್ಕಾರಿ ಶಾಲೆಗಳಿಗೆ ನರೇಗಾದಿಂದ, ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಮೂಲಕ ಮಾದರಿ ಶಾಲೆಗಳನ್ನಾಗಿ ರೂಪಿಸಲಾಗುತ್ತಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳು, ಹಳ್ಳಿ ಮಕ್ಕಳನ್ನು ತಮ್ಮತ್ತ ಕೈ ಬಿಸಿ ಕರೆಯುತ್ತಿವೆ.