ಕೋಲಾರದ ಮಿನಿ ಕೆ.ಆರ್.ಎಸ್.ಗೆ ಜೀವಕಳೆ: ಮಾರ್ಕಂಡೇಯ ಡ್ಯಾಂಗೆ ನಿತ್ಯ ಪ್ರವಾಸಿಗರ ದಂಡು

ಕೋಲಾರ: ಬಯಲುಸೀಮೆ ಕೋಲಾರದ ಮಿನಿ ಕೆ.ಆರ್.ಎಸ್ ಎಂದೇ ಖ್ಯಾತಿಯ ಮಾರ್ಕೆಂಡೇಯ ಡ್ಯಾಂ ತುಂಬಿ ಹರಿಯುತ್ತಿದ್ದು, ಮತ್ತೆ ಜೀವಕಳೆ ಬಂದಿದೆ. ಹಲವು ವರ್ಷಗಳ ಬಳಿಕ ಕಳೆದ ವರ್ಷ ಡ್ಯಾಂ ತುಂಬಿ ಹರಿದಿತ್ತು. ಆದರೆ ಈ ಬಾರಿ ಮುಂಗಾರು ಆರಂಭದಲ್ಲೆ ಡ್ಯಾಂ ಕೋಡಿ ಹರಿದಿದ್ದು, ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ.
ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಾಣವಾದ, ಡ್ಯಾಂ, ಕೆ.ಆರ್.ಎಸ್ ರೀತಿಯಲ್ಲಿ ಮಿನಿ ಕೆ.ಆರ್.ಎಸ್ ಎಂದೇ ಪ್ರಸಿದ್ದಿ. ಆದರೆ ಮಳೆ ಇಲ್ಲದೆ ಹತ್ತಾರು ವರ್ಷಗಳಿಂದ ಬರಡಾಗಿತ್ತು. ಕಳೆದ ವರ್ಷದಿಂದ ಡ್ಯಾಂನಲ್ಲಿ ನೀರು ತುಂಬಿದ್ದೇ ತಡ ಅದು ತನ್ನ ಸೌಂದರ್ಯದಿಂದಲೇ ಸಾವಿರಾರು ಜನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ. ಕಳೆದೊಂದು ವರ್ಷದಲ್ಲಿ ಉತ್ತಮ ಮಳೆಯಾದ ಪರಿಣಾಮ ಒಂದೇ ವರ್ಷದಲ್ಲಿ ಇದು ಎರಡನೇ ಬಾರಿಗೆ ಅಣೆಕಟ್ಟು ತುಂಬಿ ಕೋಡಿ ಹರಿದಿದೆ. ಈ ಮೂಲಕ ಜಿಲ್ಲೆಯ ಜನರನ್ನು ತನ್ನತ್ತ ಆಕರ್ಶಿಸುತ್ತಿದೆ.
ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ ಮಾರ್ಕಂಡೇಯ ಆಣೆಕಟ್ಟು!
ಮಾರ್ಕಂಡೇಯ ಅಣೆಕಟ್ಟು ತುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದೆ. ಬಯಲು ಸೀಮೆ ಕೋಲಾರದಲ್ಲಿ ಇಂಥಹ ಸುಂದರ ವಾತಾವರಣವನ್ನು ಸವಿಯಲು ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರುತ್ತಿದೆ. ಸುಂದರ ಬೆಟ್ಟಗುಡ್ಡಗಳ ನಡುವೆ ಅರಣ್ಯ ಪರಿಸರದಲ್ಲಿರುವ ಡ್ಯಾಂ ನೋಡಲು ನಿತ್ಯ ಸಾಕಷ್ಟು ಸಂಖ್ಯೆ ಪ್ರವಾಸಿಗರು ಆಮಿಸುತ್ತಾರೆ. ಅದರಲ್ಲೂ ವೀಕ್ಎಂಡ್ ನಲ್ಲಿ ಸುತ್ತಮುತ್ತ ಜನರಲ್ಲದೆ, ಬೆಂಗಳೂರಿನಿಂದ ಪ್ರವಾಸಿಗರು ಬರುತ್ತಿದ್ದಾರೆ. ಮಕ್ಕಳು ಕುಟುಂಬ ಸಮೇತವಾಗಿ ಕೋಡಿ ಹರಿಯುತ್ತಿದ್ದ ಸ್ಥಳದಲ್ಲಿ ಜುಳು ಜುಳು ಜರಿಯಂತ ಹರಿಯುವ ನೀರಿನಲ್ಲಿ ಮೈಯೊಡ್ಡಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಡ್ಯಾಂ ಪಕ್ಕದ ಆಂದ್ರ ಹಾಗೂ ತಮಿಳುನಾಡಿಗೂ ಹತ್ತಿರವಿದ್ದು ಅಲ್ಲಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.
ಮೂಲಭೂತ ಸೌಲಭ್ಯಗಳದ್ದೇ ಕೊರತೆ
ಮಾರ್ಕಂಡೇಯ ಡ್ಯಾಂನಲ್ಲಿ ನೀರಿದ್ದರೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಆದರೆ ಇದನ್ನು ಒಂದು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಆಣೆಕಟ್ಟು ಹಿನ್ನೀರಿನ ಭಾಗ ಸಂಪೂರ್ಣವಾಗಿ ಮಾಲೂರು ತಾಲ್ಲೂಕಿಗೆ ಸೇರಿದ್ದು, ಆಣೆಕಟ್ಟು ಮುಂಭಾಗ ಬಂಗಾರಪೇಟೆ ತಾಲ್ಲೂಕಿಗೆ ಸೇರಿದೆ. ಹೀಗಾಗಿ ಎರಡು ತಾಲ್ಲೂಕುಗಳ ತಿಕ್ಕಾಟದಿಂದ ಇಲ್ಲಿ ಯಾವುದೇ ಮೂಲಸೌಕರ್ಯ ನಿರ್ಮಾಣವಾಗಿಲ್ಲ.
ಕಳೆದ ವರ್ಷದಲ್ಲಿ ಡ್ಯಾಂ ತುಂಬಿದ ವೇಳೆ ಕೋಲಾರ ಜಿಲ್ಲಾಧಿಕಾರಿಗಳು, ಜಿಲ್ಲೆ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಭೇಟಿ ನೀಡಿ, ಈ ಬಗ್ಗೆ ಪರಿಶೀಲಿಸಿದರು. ಅದರೂ ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಲೇ ಇಲ್ಲ.
ಡ್ಯಾಂಗೆ ಬರುವ ಜನರಿಗೆ ಒಳ್ಳೆಯ ರಸ್ತೆ, ಒಂದಷ್ಟು ಕಾಲ ಕಳೆಯಲು, ಮಕ್ಕಳು ಆಟವಾಡಲು ಸಣ್ಣದೊಂದು ಪಾರ್ಕ್, ಜನರ ರಕ್ಷಣೆ, ಸುರಕ್ಷತೆ ಕ್ರಮ ವಹಿಸಬೇಕಿದೆ. ಕೆಲವೊಂದು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದರೆ, ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡಾ ದುಪ್ಪಟ್ಟಾಗುತ್ತದೆ. ಜಿಲ್ಲೆಯಲ್ಲಿ ಒಂದು ಉತ್ತಮ ಪ್ರವಾಸಿ ತಾಣವಾಗುದರ ಜೊತೆಗೆ ಸ್ಥಳೀಯ ಆಡಳಿತಕ್ಕೂ ಕೂಡಾ ಆದಾಯದ ಮೂಲವಾಗುತ್ತದೆ ಅನ್ನೋದು ಪ್ರವಾಸಿಗರ ಮನದ ಮಾತು.