ಫ್ಯೂಚರ್ ರೀಟೇಲ್ ಹಾಗೂ ರಿಲಯನ್ಸ್ ನಡುವಿನ ಡೀಲ್‌ಗೆ ಸುಪ್ರೀಂ ತಡೆ: ಅಮೆಜಾನ್‌ಗೆ ಮೇಲುಗೈ

ಭಾರತದ ದೈತ್ಯ ಉದ್ಯಮ ಸಂಸ್ಥೆ ರಿಲಯನ್ಸ್ ಹಾಗೂ ಫ್ಯೂಚರ್ ರಿಟೇಲ್ ನಡುವಿನ ಒಪ್ಪಂದಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಮೂಲಕ ಮೂರು ಕಂಪನಿಗಳ ನಡುವೆ ನಡೆಯುತ್ತಿದ್ದ ಜಿದ್ದಾಜಿದ್ದಿ ಅಂತ್ಯಗೊಂಡಿದೆ.
ರಿಲಯನ್ಸ್ ರೀಟೇಲ್ ಲಿಮಿಟೆಡ್ ಹಾಗೂ ಫ್ಯೂಚರ್ ರೀಟೇಲ್ ನಡುವೆ 24,713 ಕೋಟಿ ಮೊತ್ತದ ಒಪ್ಪಂದದ ವಿರುದ್ಧವಾಗಿ ಇ-ಕಾಮರ್ಸ್ ದಿಗ್ಗಜ ಅಮೆಜಾನ್ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ರಿಲಯನ್ಸ್ ಹಾಗೂ ಫ್ಯೂಚರ್ ನಡುವಿನ ಒಪ್ಪಂದ ಕುರಿತಾಗಿ ದೆಹಲಿ ಹೈಕೋರ್ಟ್ ನೀಡಿದ್ದ ತುರ್ತು ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ (ಆಗಸ್ಟ್ 06) ಎತ್ತಿ ಹಿಡಿದಿದೆ. ಈ ಮೂಲಕ ಅಮೆಜಾನ್‌ಗೆ ಮಹತ್ವದ ಗೆಲುವು ಲಭಿಸಿದೆ.
ಫ್ಯೂಚರ್ ರಿಟೇಲ್ ಸ್ವತ್ತುಗಳು ರಿಲಯನ್ಸ್‌ನೊಂದಿಗೆ ವಿಲೀನಗೊಳ್ಳಲು ವಿಫಲವಾದಾಗ ಮಧ್ಯಸ್ಥಿಕೆ ವಹಿಸುವಂತೆ ಅಮೆಜಾನ್ ಈ ಹಿಂದೆ ಸಿಂಗಾಪುರ ನ್ಯಾಯಾಲಯವನ್ನು ಕೇಳಿದೆ. ಆದಾಗ್ಯೂ, ಪ್ಯೂಚರ್ ರೀಟೇಲ್ ವ್ಯಾಪಾರದೊಂದಿಗೆ ಪಾಲುದಾರಿಕೆ ಮಾಡುವುದು ಮತ್ತು ಸ್ವತ್ತುಗಳನ್ನು ಮತ್ತೊಂದು ಕಂಪನಿಯೊಂದಿಗೆ ವಿಲೀನಗೊಳಿಸುವುದು ಸರಿಯಲ್ಲ ಎಂದು ಅಮೆಜಾನ್ ಹೇಳುತ್ತದೆ. ಆದಾಗ್ಯೂ, ಸಿಂಗಾಪುರದ ಮಧ್ಯಸ್ಥಿಕೆಯನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಯಲ್ಲಿ ಯಾವುದೇ ತಪ್ಪು ಕಂಡುಬಂದಿಲ್ಲ ಎಂದು ಹೇಳುತ್ತಾ ಅಮೆಜಾನ್ ಪರವಾಗಿ ತೀರ್ಪು ನೀಡಿತು.
ಸಿಂಗಾಪುರದ ಮಧ್ಯಸ್ಥರ ತುರ್ತು ಆದೇಶ ಸೆಕ್ಷನ್ 17(1) ಹಾಗೂ ಸೆಕ್ಷನ್ 17 (2) ಅನ್ವಯ ಆದೇಶವನ್ನು ಭಾರತೀಯ ಕಾನೂನಿನ ಅನ್ವಯ ಜಾರಿಗೊಳಿಸಲು ಸಾಧ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ರಿಲಯನ್ಸ್ ಹಾಗೂ ಫ್ಯೂಚರ್ ರಿಟೇಲ್ ನಡುವೆ 24,713 ಕೋಟಿ ರೂಪಾಯಿ ಮೊತ್ತದ ಒಪ್ಪಂದವಾಗಿತ್ತು. ಜೊತೆಗೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಮತ್ತು ಫ್ಯೂಚರ್ಸ್ ಗ್ರೂಪ್ ನಡುವಿನ ಒಪ್ಪಂದಕ್ಕೆ ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ಅನುಮೋದನೆ ಕೂಡ ನೀಡಿತ್ತು.