ಪ್ರವಾಹ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಿ – ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

 ಪ್ರವಾಹ ಸಂತ್ರಸ್ತರಿಗೆ ಕೂಡಲೇ ಪರಿಹಾರ ನೀಡಿ – ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಬೆಂಗಳೂರು : ಪ್ರವಾಹದಿಂದ ಹಾನಿಗೆ ಒಳಗಾಗಿರುವ ಜಿಲ್ಲೆಗಳ ಸಂತ್ರಸ್ತರಿಗೆ, ಕೂಡಲೇ ಸೂಕ್ತ ಪರಿಹಾರ ಬಿಡುಗಡೆ ಮಾಡುವಂತೆ ವಿಧಾನಸಭೆ ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಪ್ರವಾಹಪೀಡಿತ ಬಾಗಲಕೋಟೆ, ಬೆಳಗಾವಿ, ಗದಗ ಉತ್ತರ ಕನ್ನಡ ಜಿಲ್ಲೆಯ ಹಲವಾರು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿದ್ದೆ.

ಭಾರಿ ಪ್ರಮಾಣದ ಮಳೆ ಈ ಜಿಲ್ಲೆಗಳಲ್ಲಿ ತೀವ್ರ ಸ್ವರೂಪದ ಅನಾಹುತಗಳನ್ನು ಸೃಷ್ಟಿಸಿದೆ. ಸಹಸ್ರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನ-ಜಾನವಾರುಗಳು, ಮನೆಗಳು ಹಾನಿಗೊಳಗಾಗಿವೆ. ಮನೆಯೊಳಗಿದ್ದ ಪಾತ್ರೆ-ಪಗಡೆ ಕೊಚ್ಚಿಕೊಂಡು ಹೋಗಿವೆ. ಸಂತ್ರಸ್ಥರಿಗೆ ಸರಿಯಾಗಿ ಉಣ್ಣಲು ಅನ್ನ ಇಲ್ಲ, ಉಡಲು ಬಟ್ಟೆ ಇಲ್ಲ, ಉಳಿಯಲು ಸೂರಿಲ್ಲ, ಕುಡಿಯಲು ನೀರಿಲ್ಲ ಎನ್ನುವ ಪರಿಸ್ಥಿತಿ ಇರುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.

ಮನೆಯೊಳಗಿದ್ದ ಪಾತ್ರೆ ಪಗಡೆ, ಬಟ್ಟೆಗಳು, ಮಕ್ಕಳ ಶಾಲಾ ಬ್ಯಾಗು, ಪುಸ್ತಕಗಳು, ದವಸ ಧಾನ್ಯಗಳ ಸಮೇತ ನಿತ್ಯ ಬಳಕೆಯ ವಸ್ತುಗಳು ಕೊಚ್ಚಿಕೊಂಡು ಹೋಗಿವೆ. ಮನೆಯೊಳಗೆ ನುಗ್ಗಿದ ನೀರು ನೂರಾರು ಮನೆಗಳನ್ನು ಹಾನಿ ಮಾಡಿದೆ. ಪ್ರವಾಹದಿಂದ ಕೊಚ್ಚಿ ಬಂದ ಮಣ್ಣು, ಕೆಸರಿನಿಂದ ಸಾವಿರಾರು ಮನೆಗಳು ಮುಚ್ಚಿ ಹೋಗಿವೆ. ಪ್ರವಾಹ ಉಂಟಾದ ಪ್ರದೇಶಗಳ ಜನರ ಆರೋಗ್ಯ ಪರಿಸ್ಥಿತಿ ಸಹ ಕೆಟ್ಟದಾಗಿದೆ. ಈ ನಿಟ್ಟಿನಲ್ಲಿ ಪೌಷ್ಠಿಕ ಆಹಾರ, ಹಾಗೂ ಆರೋಗ್ಯ ಸೇವೆ ಒದಗಿಸಲು ತಕ್ಷಣ ಕ್ರಮ ಜರುಗಿಸಬೇಗಿದೆ.

ಭತ್ತದ ಗದ್ದೆಗಳು, ತೋಟದ ಬೆಳೆಗಳು ನೀರಲ್ಲಿ ಕೊಚ್ಚಿ ಹೋಗಿವೆ, ನೀರಲ್ಲಿ ಮುಳುಗಿ ಕೊಳೆತು ಹೋಗಿವೆ. ದನದ ಕೊಟ್ಟಿಗೆಗಳು ಜಲಾವೃತ ಆಗಿರುವುದರಿಂದ ಸಂಗ್ರಹಿಸಿದ್ದ ಮೇವು ನೀರಿನಲ್ಲಿ ಕೊಚ್ಚಿ ಹೋಗಿ ಮೇವಿಗೂ ತತ್ವಾರ ಬಂದಿದೆ. 2019 ಮತ್ತು 2020 ರಲ್ಲಿ ಹಾನಿಗೊಳಗಾದ ಪ್ರದೇಶಗಳ ಜನರಿಗೆ ಇದುವರೆಗೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಮನೆ ಕಳೆದುಕೊಂಡವರಿಗೆ ಮನೆಗಳನ್ನು ನೀಡಿಲ್ಲ. ನದಿ ಪಾತ್ರದ ಗ್ರಾಮಗಳ ಸ್ಥಳಾಂತರ ಆಗಿಲ್ಲ ಎಂದು ನೆರೆಪೀಡಿತರು ತಮ್ಮ ಸಂಕಷ್ಟ ಹೇಳಿಕೊಂಡು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.

ಹಾನಿಗೊಳಗಾಗಿರುವ ರಸ್ತೆ, ಸೇತುವೆ, ಶಾಲೆ, ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಸರ್ಕಾರಿ ಕಚೇರಿ ಕಟ್ಟಡಗಳನ್ನು ದುರಸ್ತಿ/ ಪುನರ್‌ನಿರ್ಮಿಸಬೇಕು. ಮೂರು ವರ್ಷಗಳಿಂದ ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಿರುವ ಪ್ರವಾಹ ಪರಿಹಾರದ ಮೊತ್ತ ರಾಜ್ಯಕ್ಕೆ ಅವಮಾನ ಮಾಡಿದಂತಿದೆ. ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ನ್ಯಾಯೋಚಿತ ಪರಿಹಾರ ಬಿಡುಗಡೆ ಮಾಡಿಸಬೇಕು. ಕೂಡಲೇ ರಾಜ್ಯ ಸರ್ಕಾರ ನೆರೆ ಸಂತ್ರಸ್ತರ ನೆರವಿಗೆ ಧಾವಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.