ಪಶ್ಚಿಮ ಬಂಗಾಳದಲ್ಲಿ ಸೆ.30ಕ್ಕೆ ಉಪಚುನಾವಣೆ : ಸಿಎಂ ಮಮತಾ ಬ್ಯಾನರ್ಜಿ ಭವಿಷ್ಯ ನಿರ್ಧಾರ

 ಪಶ್ಚಿಮ ಬಂಗಾಳದಲ್ಲಿ ಸೆ.30ಕ್ಕೆ ಉಪಚುನಾವಣೆ : ಸಿಎಂ ಮಮತಾ ಬ್ಯಾನರ್ಜಿ ಭವಿಷ್ಯ ನಿರ್ಧಾರ

ನವದೆಹಲಿ: ಸೆ. 30ರಂದು ಪಶ್ಚಿಮ ಬಂಗಾಳದ 3 ವಿಧಾನಸಭಾ ಕ್ಷೇತ್ರಗಳು ಹಾಗೂ ಒರಿಸ್ಸಾದ 1 ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಬಂಗಾಳದ ಸಂಸರ್ ಗಂಜ್, ಜಂಗೀಪುರ, ಬಾಬಿನೀಪುರ ಹಾಗೂ ಒಡಿಶಾದ ಪಿಪ್ಲಿಯ ಎರಡು ಸ್ಥಾನಗಳಿಗೆ ಉಪಚುನಾವಣೆ ಘೋಷಿಸಲಾಗಿದ್ದು, ಉಳಿದ ಕ್ಷೇತ್ರಗಳ ಉಪಚುನಾವಣೆಯನ್ನು ಮುಂದೂಡಲಾಗಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೆ. 13 ಕೊನೆಯ ದಿನವಾಗಿದೆ. ನಾಮಪತ್ರ ವಾಪಾಸ್ ಪಡೆಯಲು ಸೆ. 16 ಕೊನೆಯ ದಿನವಾಗಿದೆ. ಸೆ.30 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 3 ರಂದು ಮತಗಳನ್ನು ಎಣಿಕೆ ನಡೆಯಲಿದೆ. ಕೋವಿಡ್ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಇತರ 31 ಕ್ಷೇತ್ರಗಳ ಉಪ ಚುನಾವಣೆಗಳನ್ನು ಮುಂದೂಡಲಾಗಿದೆ. ಪಶ್ಚಿಮ ಬಂಗಾಳ ರಾಜ್ಯದ ಸಾಂವಿಧಾನಿಕ ತುರ್ತುಸ್ಥಿತಿ ಮತ್ತು ವಿಶೇಷ ವಿನಂತಿಯನ್ನು ಪರಿಗಣಿಸಿ ಭಬನಿಪುರಕ್ಕೆ ಉಪಚುನಾವಣೆ ನಡೆಸಲು ನಿರ್ಧರಿಸಲಾಗಿದೆ.

ಕಳೆದ ಏಪ್ರಿಲ್-ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದರು. ಮಮತಾ ಬ್ಯಾನರ್ಜಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸ್ಪರ್ಧಿಸಿ, ಸೋಲನ್ನು ಅನುಭವಿಸಿದ್ದರು.  ಆದರೆ ಬಂಗಾಳ ವಿಧಾನಸಭೆಯಲ್ಲಿ ಒಟ್ಟು 294 ಸ್ಥಾನಗಳಲ್ಲಿ 213 ಸ್ಥಾನಗಳಲ್ಲಿ ಟಿಎಂಸಿ ಗೆದ್ದು, ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಇಗ ಬಾಬಿನೀಪುರ ಕ್ಷೇತ್ರದಿಂದ ಉಪ ಚುನಾವಣೆಗೆ ಸ್ಪರ್ಧಿಸಲಿರುವ ಮಮತಾ ಬ್ಯಾನರ್ಜಿ, ಈ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಸಿಎಂ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯ. ಹೀಗಾಗಿ ಬಾಬಿನೀಪುರ ಉಪಚುನಾವಣೆ ಸಿಎಂ ಮಮತಾ ಬ್ಯಾನರ್ಜಿಯ ಭವಿಷ್ಯ ನಿರ್ಧರಿಸಲಿದೆ.