ಪಂಜಾಬ್: ಕಾಂಗ್ರೆಸ್ ಸಿಎಂ ಅಭ್ಯರ್ಥಿ ಯಾರು ಗೊತ್ತಾ..?

ಚರಣ್ ಜಿತ್ ಸಿಂಗ್ ಅವರನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಘೋಷಣೆ ಮಾಡಿದ ಕ್ಷಣ
ನವದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಇರುವಂತೆಯೇ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನ ಘೋಷಣೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪಕ್ಷದ ಸಂಪ್ರದಾಯ ಮುರಿದು ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ್ದಾರೆ ರಾಹುಲ್ ಗಾಂಧಿ. ಈವರೆಗೆ ಪಕ್ಷವು ಬಹುಮತ ಪಡೆದ ನಂತರವಷ್ಟೇ ಮುಖ್ಯಮಂತ್ರಿ ಯಾರು ಎಂಬುದನ್ನ ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಪಂಜಾಬ್ ನಲ್ಲಿ ಹಳೆಯ ಸಂಪ್ರದಾಯಕ್ಕೆ ಇತಿಶ್ರೀಯ ಹಾಡಲಾಗಿದೆ.
ಹಾಲಿ ಮುಖ್ಯಮಂತ್ರಿ ಚರಣ್ ಜಿತ್ ಚನ್ನಿ ಸಿಎಂ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಹಾಗೂ ಚರಣ್ ಜಿತ್ ನಡುವಿನ ಅಸಮಾಧಾನ, ಭಿನ್ನಮತ, ವೈಷಮ್ಯ ಬಹಳ ಚಾಣಾಕ್ಷತನದಿಂದ ರಾಹುಲ್ ಗಾಂಧಿ ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಾವು ಯಾವುದೇ ನಿರ್ಧಾರ ಕೈಗೊಳ್ಳದೇ ಪಂಜಾಬ್ ಜನತೆಯ ಅಭಿಪ್ರಾಯದಂತೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಣೆ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಇದು ನನ್ನ ನಿರ್ಧಾರ ಅಲ್ಲ. ಈ ಬಗ್ಗೆ ನಾನು ಯಾವುದೇ ನಿರ್ಧಾರ ಮಾಡಿಲ್ಲ. ಪಂಜಾಬ್ ನ ಜನರು, ಯುವ ಜನತೆ, ಕಾರ್ಯಕಾರಿ ಸಮಿತಿ ಸದಸ್ಯರ ಅಭಿಪ್ರಾಯದಂತೆ ಘೋಷಣೆ ಮಾಡಿದ್ದೇನೆ. ನನ್ನ ಅಭಿಪ್ರಾಯಕ್ಕಿಂತ ನಿಮ್ಮ ಅಭಿಪ್ರಾಯ ಮುಖ್ಯ. ಬಡವರ ಪರಿಸ್ಥಿತಿ ಬಗ್ಗೆ ಅರಿತಿರುವ ವ್ಯಕ್ತಿ ನಮಗೆ ಬೇಕೆಂದು ಪಂಜಾಬ್ ಜನತೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು.
ಟೆಲಿ ಮತದಾನ ಮೂಲಕ ಚಲಾವಣೆಯಾದ ಮತಗಳ ಆಧಾರದ ಮೇಲೆ ಚರಣ್ ಜಿತ್ ಹೆಸರು ಘೋಷಿಸಲಾಗಿದೆ. ಸಿಧು ಅವರಿಗಿಂತಲೂ ಚರಣ್ ಜಿತ್ ಹೆಚ್ಚು ಮತ ಪಡೆದಿದ್ದಾರೆ. ೨೦೧೭ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ವಲಸೆ ಬಂದಿರುವ ಸಿಧು ಈ ಬಾರಿ ಮುಖ್ಯಮಂತ್ರಿ ಕುರ್ಚಿ ಮೇಲೆ ಕಣ್ಣಿಟ್ಟಿದ್ದರು. ಪ್ರಬಲ ಆಕಾಂಕ್ಷಿ ಕೂಡ ಆಗಿದ್ದರು. ಆದರೆ, ಅವರ ಯಾವುದೇ ತಂತ್ರ, ಆಸೆ, ಆಕಾಂಕ್ಷೆ ಕೈ ಗೂಡಿಲ್ಲ.