ಪಂಚ ಭೂತಗಳಲ್ಲಿ ಲೀನವಾದ ಗಾನ ಕೋಗಿಲೆ ಲತಾ ಮಂಗೇಶ್ಕರ್

ಮುಂಬೈ: ಬಹು ಅಂಗಾಂಗ ವೈಫಲ್ಯದಿಂದ ಇಂದು ನಿಧನರಾಗಿದ್ದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ರವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಈ ಮೂಲಕ ಗಾನ ಕೋಗಿಲೆ ಲತಾ ಮಂಗೇಶ್ಕರ್ ಪಂಚ ಭೂತಗಳಲ್ಲಿ ಲೀನವಾದರು. ಇದಕ್ಕೂ ಮೊದಲಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟ-ನಟಿಯರು ಸೇರಿದಂತೆ ವಿವಿಧ ಗಣ್ಯರು ಅಂತಿಮನ ನಮನ ಸಲ್ಲಿಸಿದರು.
ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಇಂದು ಬೆಳಿಗ್ಗೆ 8.12ಕ್ಕೆ ಕೋವಿಡ್ ಸೋಂಕಿನಿಂದಾಗಿ ನಿಧನರಾಗಿದ್ದರು. ಖಾಸಗಿ ಆಸ್ಪತ್ರೆಯಿಂದ ಅವರ ಪಾರ್ಥೀವ ಶರೀರವನ್ನು ಮುಂಬೈನ ಶಿವಾಜಿ ಪಾರ್ಕ್ ಗೆ ಮಿಲಿಟರಿ ವಾಹನದ ಮೂಲಕ, ಮೆರವಣಿಗೆಯಲ್ಲಿ ತರಲಾಯಿತು. ಶಿವಾಜಿ ಪಾರ್ಕ್ ಗೆ ಆಗಮಿಸಿದಂತ ಪ್ರಧಾನಿ ನರೇಂದ್ರ ಮೋದಿ ಕ್ರಿಕೆಟ್ ದಂತ ಕತೆ ಸಚಿನ್ ತೆಂಡೋಲ್ಕರ್, ಬಾಲಿವುಡ್ ನಟ ಶಾರುಖಾನ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಸೇರಿದಂತೆ ಬಾಲಿವುಡ್ ನಟ-ನಟಿಯರು, ರಾಜಕೀಯ ಗಣ್ಯರು ಅಂತಿಮ ನಮನವನ್ನು ಸಲ್ಲಿಸಿದರು.
ಈ ಬಳಿಕ ಲತಾ ಮಂಗೇಶ್ಕರ್ ಅವರ ಪಾರ್ಥೀವ ಶರೀರಕ್ಕೆ ಅಂತಿಮ ವಿಧಿ ವಿಧಾನ ನೆರವೇರಿಸಲಾಯಿತು. ಇದಾದ ಬಳಿಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಲತಾ ಮಂಗೇಶ್ಕರ್ ಅವರ ನಿಧನವು ಭಾರತೀಯ ಸಂಗೀತ ಭ್ರಾತೃತ್ವದಲ್ಲಿ ಭಾರಿ ನಷ್ಟವನ್ನು ಉಂಟು ಮಾಡಿದೆ.
ಲತಾ ಮಂಗೇಶ್ಕರ್ ಅವರಿಗೆ 1990ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು. ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ, ಅವರಿಗೆ 1969ರಲ್ಲಿ ಪದ್ಮಭೂಷಣ ಮತ್ತು 2001ರಲ್ಲಿ ಭಾರತ ರತ್ನ ನೀಡಲಾಯಿತು. ಅವರು 1942ರಲ್ಲಿ ಗಾಯಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ, ಅವರು 36ಕ್ಕೂ ಹೆಚ್ಚು ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಅಸಂಖ್ಯಾತ ಹಾಡುಗಳನ್ನು ಹಾಡಿದ್ದಾರೆ.