ಆಟೋ ಪ್ರಯಾಣ ದರ ಏರಿಕೆ: ಕನಿಷ್ಠ ದರ 25ರಿಂದ 30 ರೂಪಾಯಿ!

ಬೆಂಗಳೂರು: ಬೆಂಗಳೂರಲ್ಲಿ 8 ವರ್ಷದ ಬಳಿಕ ಆಟೋ ಪ್ರಯಾಣ ದರದಲ್ಲಿ ಹೆಚ್ಚಳ ಆಗಿದೆ. ಕನಿಷ್ಠ ದರವನ್ನು 25 ರಿಂದ 30 ರೂಪಾಯಿಗೆ ಏರಿಕೆ ಮಾಡಲಾಗಿದೆ. ಕನಿಷ್ಠ ದರದ ನಂತರ ಪ್ರತಿ ಕಿ.ಮೀ.ಗೆ 12 ರೂಪಾಯಿ ಇದ್ದ ದರ 15 ರೂ.ಗೆ ಏರಿಕೆ ಆಗಿದೆ.
ಗ್ಯಾಸ್, ಡಿಸೇಲ್, ಪೆಟ್ರೋಲ್ ದರ 8 ವರ್ಷದಲ್ಲಿ ಗಗನಕ್ಕೇರಿವೆ. ಆಟೋ ಗ್ಯಾಸ್ ದರವೂ ಏರಿಕೆ ಕಂಡಿದ್ದು, ಆಟೋ ಚಾಲಕರು ಸಂಕಷ್ಟಕ್ಕೀಡಾಗಿದ್ದರು. ಮೀಟರ್ ಹಾಕಿ ಬಾಡಿಗೆ ಓಡಿಸೋದು ಕಷ್ಟ ಆಗ್ತಿದೆ. ಆಟೋ ಮೀಟರ್ ದರ ಹೆಚ್ಚಳ ಮಾಡಬೇಕು ಎಂದು ಆಟೋ ಚಾಲಕರ ಸಂಘಟನೆಗಳು ಸರ್ಕಾರವನ್ನು ಒತ್ತಾಯ ಮಾಡಿದ್ದವು. ಆಟೋ ಚಾಲಕರ ಮನವಿಗೆ ಮಣಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಮತ್ತು ರಾಜ್ಯ ಸಾರಿಗೆ ಇಲಾಖೆ, ದರ ಪರಿಷ್ಕರಣೆ ಮಾಡಿ ಆದೇಶ ಹೊರಡಿಸಿದೆ.
ಆಟೋ ಪ್ರಯಾಣ ದರ ಪರಿಷ್ಕರಿಸಿ ಹೊರಡಿಸಿರುವ ಹೊಸ ಆದೇಶ, 2021ರ ಡಿಸೆಂಬರ್ 1ರಿಂದ ಅನ್ವಯವಾಗಲಿದೆ. ಕನಿಷ್ಠ ದರ ಹಾಗೂ ನಂತರದ ಪ್ರತಿ ಕಿಮೀ ದರದಲ್ಲೂ ಹೆಚ್ಚಳ ಮಾಡಲಾಗಿದೆ. ಈ ಮೊದಲು 1.8 ಕಿ.ಮೀ.ಗೆ ಕನಿಷ್ಠ ದರ 25 ರೂಪಾಯಿ ಇತ್ತು. ಇದನ್ನು ರೂ 30ಕ್ಕೆ ಏರಿಸಲಾಗಿದೆ. 1.8 ಕಿ.ಮೀ. ನಂತರ ಪ್ರಯಾಣಿಸಿದರೆ ಪ್ರತಿ ಕಿ.ಮೀ. 12 ರೂ. ದರ ಇತ್ತು. ಇದೀಗ ಈ ದರ 15 ರೂಪಾಯಿ ಆಗಿದೆ.
ರಾತ್ರಿ ವೇಳೆ ಒಂದೂವರೆ ಪಟ್ಟು ದರ ಇರಲಿದೆ.