ದಸರಾ ನಂತರ ಪ್ರಾಥಮಿಕ ಶಾಲೆ ಆರಂಭ ಬಗ್ಗೆ ಅಂತಿಮ ನಿರ್ಧಾರ: ಆರೋಗ್ಯ ಸಚಿವ ಡಾ. ಸುಧಾಕರ್

ಬೆಂಗಳೂರು: ದಸರಾ ಹಬ್ಬ ಮುಗಿದ ನಂತರ ರಾಜ್ಯದಲ್ಲಿ 1ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ಪುನರಾರಂಭ ಮಾಡುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ಈ ಬಗ್ಗೆ ಇಂದು ಮಾತನಾಡಿದ ಅವರು, ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ಆತುರದಲ್ಲಿ ಪುನರಾರಂಭಿಸಿಲ್ಲ. ಪೋಷಕರು ಹಾಗೂ ತಜ್ಞರೊಂದಿಗೆ ಚರ್ಚಿಸಿದ ನಂತರವೇ ಹಂತಹಂತವಾಗಿ ತೆರೆಯಲಾಗುತ್ತಿದೆ. ಇದೀಗ 1-5ನೇ ತರಗತಿ ಮಕ್ಕಳಿಗೆ ಶಾಲೆ ತೆರೆಯುವ ಕುರಿತು ರಾಜ್ಯ ಸರ್ಕಾರ ಆಲೋಚನೆ ಮಾಡುತ್ತಿದೆ ಎಂದಿದ್ದಾರೆ.
ದಸರ ಹಬ್ಬದ ಸಮಯ ಮುಗಿದ ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಸರ್ಕಾರ ಸಮಾಲೋಚನೆ ನಡೆಸಿದ ನಂತರ ಹಾಗೂ ಕ್ಯಾಬಿನೆಟ್‌ನಲ್ಲಿ ಚರ್ಚೆ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ 6-8ನೇ ತರಗತಿವರೆಗೆ ಶಾಲೆಗಳನ್ನು ಪುನಃ ತೆರೆದು ಒಂದು ತಿಂಗಳಾಗಿದೆ. ಇದುವರೆಗೂ ಶಾಲೆಗಳಿಂದ ನಮಗೆ ಆತಂಕದ ವರದಿಯಾಗಿಲ್ಲ ಎಂದರು.
12 ವರ್ಷದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ಆದರೆ ಪೋಷಕರ ಕಾಳಜಿ ಹಾಗೂ ಮಕ್ಕಳು ಸಣ್ಣವರಿರುವುದರಿಂದ ಸರ್ಕಾರ 1-5ನೇ ತರಗತಿ ಮಕ್ಕಳಿಗೆ ಶಾಲೆ ತೆರೆಯಲು ಆಲೋಚನೆ ಮಾಡುತ್ತಿದೆ. ಆತುರದಲ್ಲಿ ನಾವು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಮಕ್ಕಳಿಗೆ ತೊಂದರೆಯಾಗುವ ಸೂಚನೆ ಕಂಡುಬಂದ ತಕ್ಷಣವೇ ನಮ್ಮ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಬೆಂಗಳೂರಿನ ಶಾಲೆಯೊಂದರಲ್ಲಿ ಸುಮಾರು 60 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ ನಂತರ ಶಾಲೆ ಮುಚ್ಚಿದ ಕುರಿತು ಪ್ರತಿಕ್ರಿಯಿಸಿದ ಅವರು, ಅದೊಂದು ಸಂಗತಿಯನ್ನೇ ಇಟ್ಟುಕೊಂಡು ಶಾಲೆ ಬಂದ್ ಮಾಡುವ ಆಲೋಚನೆ ಮಾಡುವುದು ಸರಿಯಲ್ಲ. ಈಗಾಗಲೇ ಆ ಶಾಲೆಯನ್ನು ಮುಚ್ಚಲಾಗಿದೆ ಹಾಗೂ ಮಕ್ಕಳನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗಿದೆ. ನಾವು ರಾಜ್ಯದ ಪ್ರತಿ ಶಾಲೆ ಮೇಲೂ ನಿಗಾ ಇರಿಸಿದ್ದೇವೆ ಎಂದು ತಿಳಿಸಿದರು.