ತ್ರಿಪುರಾ ಚುನಾವಣೆ ಮೇಲೆ ಕಣ್ಣಿಟ್ಟ ಟಿಎಂಸಿ: ಅಭಿಷೇಕ್ ಬ್ಯಾನರ್ಜಿ ಬೆಂಗಾವಲು ಪಡೆ ಮೇಲಿನ ದಾಳಿಕೋರರ ಬಂಧನಕ್ಕೆ ಆಗ್ರಹ

ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆತ್ಮವಿಶ್ವಾಸ ಬಂಗಾಳ ವಿಧಾನ ಸಭಾ ಚುನಾವಣೆ ಗೆದ್ದ ಮೇಲೆ ಇಮ್ಮಡಿಯಾದಂತೆ ಕಾಣಿಸುತ್ತಿದೆ. ಅಲ್ಲದೇ ಪಶ್ಚಿಮ ಬಂಗಾಳದ ಅಕ್ಕಪಕ್ಕದ ರಾಜ್ಯಗಳಿಗೂ ತನ್ನ ತೆಕ್ಕೆಯನ್ನು ವಿಸ್ತರಿಸಲು ಹವಣಿಸುತ್ತಿರುವ ಟಿಎಂಸಿ ಈಗ ತ್ರಿಪುರಾದಲ್ಲಿ ತನ್ನ ಭೂಮಿಕೆಯನ್ನು ಸಿದ್ದ ಮಾಡಿಕೊಳ್ಳುತ್ತಿದೆ. 

ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಬೆಂಗಾವಲು ಪಡೆಯ ಮೇಲೆ ದಾಳಿಯ ಕುರಿತು ರಾಜ್ಯ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ತೃಣಮೂಲ ಕಾಂಗ್ರೆಸ್ ನಾಯಕರು ಗುರುವಾರ ತ್ರಿಪುರಾದ ಅಗರ್ತಲಾದಲ್ಲಿ ಧರಣಿ ನಡೆಸಿದರು.

ಪ್ರತಿಭಟನೆಯ ನೇತೃತ್ವವನ್ನು ಟಿಎಂಸಿ ವಕ್ತಾರ ಕುನಾಲ್ ಘೋಷ್ ವಹಿಸಿಕೊಂಡಿದ್ದರು,  ಅಗರ್ತಲಾದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ಟಿಎಂಸಿ ಬೆಂಬಲಿತ ಕಾರ್ಮಿಕರು ಮತ್ತು ಕಾರ್ಯಕರ್ತರು ಇದ್ದರು.

ಪ್ರತಿಭಟನಾ ನಿರತ ಟಿಎಂಸಿ ಸದಸ್ಯರಲ್ಲಿ ಒಬ್ಬರಾದ ಸುದೀಪ್ ರಾಹಾ, “72 ಗಂಟೆಗಳು ಕಳೆದರೂ ಪೊಲೀಸರು ಇನ್ನೂ ಒಬ್ಬರನ್ನು ಬಂಧಿಸಿಲ್ಲ. ಇದಲ್ಲದೆ, ನಾವು ನಿನ್ನೆ ಡಿಜಿಪಿಗೆ ದೂರು ನೀಡಿದ್ದೇವೆ. 24 ಗಂಟೆಗಳು ಕಳೆದರೂ ಯಾವುದೇ ಕ್ರಮವಿಲ್ಲ. ನಾವು ಮಾಜಿ ಸಂಸದ ಕುನಾಲ್ ಘೋಷ್ ಜೊತೆಗೆ ಪೊಲೀಸ್ ಠಾಣೆಗೆ ಹೋಗಿದ್ದೆವು ಆದರೆ ನಾವು ದಾರಿ ಮದ್ಯದಲ್ಲೇ ನಮ್ಮನ್ನು ತಡೆದು ಅಟ್ಟಹಾಸ ಮೆರೆಯಲಾಯಿತು. ಯಾವುದೇ ಕ್ರಮ ಕೈಗೊಂಡಿದ್ದೀರಾ ಅಥವಾ ಇಲ್ಲವೇ ಎಂದು ನಾವು ಪೊಲೀಸರನ್ನು ಕೇಳಿದಾಗ, ಅವರು ಈ ವಿಷಯದ ಬಗ್ಗೆ ತಿಳಿದಿಲ್ಲ ಎಂದು ಹೇಳಿದರು. ಈ ರಾಜ್ಯದಲ್ಲಿ ಯಾವುದೇ ಸುರಕ್ಷತೆಯಿಲ್ಲ, ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ ತೀರ ಹದಗೆಟ್ಟು ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿಷೇಕ್ ಬ್ಯಾನರ್ಜಿಯವರ ಬೆಂಗಾವಲಿನ ಮೇಲೆ ದಾಳಿ ನಡೆಸಿರುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವವರೆಗೂ ತಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ, ಇದನ್ನು ಮುಂದುವರಿಸುವುದಾಗಿ ಟಿಎಂಸಿ ಹೇಳಿದೆ.

ತೃಣಮೂಲ ಕಾಂಗ್ರೆಸ್ ಅಗರ್ತಲಾದ ತ್ರಿಪುರಾ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಬುಧವಾರ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದೆ. ದೂರುದಾರರು ದಾಳಿಯ ವೀಡಿಯೊ ಪ್ರತಿಯನ್ನು ಲಗತ್ತಿಸಿದ್ದಾರೆ ಎಂದು ಹೇಳಲಾಗಿದೆ.

ಅಗರ್ತಲಾದಲ್ಲಿ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್​ ತಂಡವನ್ನು ಬಂಧಿಸಿದ ವರದಿಯ ಮೇಲೆ ಪಶ್ಚಿಮ ಬಂಗಾಳ ಸಚಿವರಾದ ಬ್ರಾತ್ಯಾ ಬಸು, ಮೊಲಾಯ್ ಘಟಕ್ ಮತ್ತು ಸಂಸದ ಡೆರೆಕ್ ಒಬ್ರಿಯಾನ್​ ಸೇರಿದಂತೆ ಟಿಎಂಸಿಯ ಪ್ರಮುಖ ನಾಯಕರು ತ್ರಿಪುರಕ್ಕೆ ಭೇಟಿ ನೀಡಿದ್ದರು.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಆರಾಮದಾಯಕ ಬಹುಮತದೊಂದಿಗೆ ಗೆದ್ದ ನಂತರ, ತೃಣಮೂಲ ಕಾಂಗ್ರೆಸ್ ಈಗ 2023 ರಲ್ಲಿ  ನಡೆಸಲಿರುವ ತ್ರಿಪುರಾದ ಚುನಾವಣೆ ಮೇಲೆ ಕಣ್ಣಿಟ್ಟಿದೆ.ಪ್ರಧಾನಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಆತ್ಮವಿಶ್ವಾಸ ಬಂಗಾಳ ವಿಧಾನ ಸಭಾ ಚುನಾವಣೆ ಗೆದ್ದ ಮೇಲೆ ಇಮ್ಮಡಿಯಾದಂತೆ ಕಾಣಿಸುತ್ತಿದೆ. ಅಲ್ಲದೇ ಪಶ್ಚಿಮ ಬಂಗಾಳದ ಅಕ್ಕಪಕ್ಕದ ರಾಜ್ಯಗಳಿಗೂ ತನ್ನ ತೆಕ್ಕೆಯನ್ನು ವಿಸ್ತರಿಸಲು ಹವಣಿಸುತ್ತಿರುವ ಟಿಎಂಸಿ ಈಗ ತ್ರಿಪುರಾದಲ್ಲಿ ತನ್ನ ಭೂಮಿಕೆಯನ್ನು ಸಿದ್ದ ಮಾಡಿಕೊಳ್ಳುತ್ತಿದೆ.