ಡ್ರಗ್ಸ್ ಕೇಸ್ ನಲ್ಲಿ ಶಾರುಖ್ ಖಾನ್ ಪುತ್ರ: ಆರ್ಯನ್ ಸೇರಿ 7 ಮಂದಿ ಎನ್.ಸಿ.ಬಿ ವಶಕ್ಕೆ

ಮುಂಬೈ: ಡ್ರಗ್ಸ್ ಬಳಕೆ ಆರೋಪದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಸೇರಿದಂತೆ 7 ಮಂದಿಯನ್ನು ಎನ್.ಸಿ.ಬಿ ವಶಕ್ಕೆ ಪಡೆದಿದೆ. ಮುಂಬೈನ ಸಮುದ್ರ ತೀರದಲ್ಲಿ ಐಷಾರಾಮಿ ಹಡಗಿನಲ್ಲಿ ಶನಿವಾರ ರಾತ್ರಿ ಪಾರ್ಟಿ ನಡೆಯುತ್ತಿತ್ತು. ಆ ವೇಳೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಬಾಲಿವುಡ್ನ ಒಬ್ಬ ಸ್ಟಾರ್ ನಟನ ಮಗನನ್ನು ವಶಕ್ಕೆ ಪಡೆದ ಬಗ್ಗೆ ವರದಿ ಆಗಿತ್ತು. ಅದು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎಂದು ಈಗ ಹೇಳಲಾಗುತ್ತಿದೆ.
ಆರ್ಯನ್ ಖಾನ್ ಮೊಬೈಲ್ ಫೋನ್ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅದರಲ್ಲಿನ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ. ಡ್ರಗ್ಸ್ ಪಾರ್ಟಿ ಆಯೋಜಕರ ಜೊತೆ ಆರ್ಯನ್ ಯಾವ ರೀತಿ ಸಂಪರ್ಕದಲ್ಲಿ ಇದ್ದರು? ಯಾವ ಸಂದೇಶಗಳು ರವಾನೆ ಆಗಿವೆ ಎಂಬಿತ್ಯಾದಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈವರೆಗೂ ಆರ್ಯನ್ ಮೇಲೆ ಯಾವುದೇ ಕೇಸ್ ದಾಖಲಾಗಿಲ್ಲ. ವಶಕ್ಕೆ ಪಡೆದು ವಿಚಾರಣೆಯಷ್ಟೇ ಮಾಡಲಾಗುತ್ತಿದೆ.
ಪಾರ್ಟಿ ನಡೆದ ಸ್ಥಳದಲ್ಲಿ ಮಾದಕ ವಸ್ತುಗಳು ಕೂಡ ಪತ್ತೆ ಆಗಿವೆ. ಆದರೆ ಎಷ್ಟು ಪ್ರಮಾಣದ ಡ್ರಗ್ಸ್ ಸಿಕ್ಕಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಬಿಟ್ಟುಕೊಟ್ಟಿಲ್ಲ. ವಶಕ್ಕೆ ಪಡೆದವರನ್ನು ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಆರ್ಯನ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಸಿಲುಕಿರುವ ವಿಷಯ ತಿಳಿಯುತ್ತಿದ್ದಂತೆ ಶಾರುಖ್ ಖಾನ್ ಪಠಾಣ್ ಚಿತ್ರದ ಚಿತ್ರೀಕರಣ ಮೊಟಕುಗೊಳಿಸಿ ಸ್ಪೇನ್ ನಿಂದ ಭಾರತಕ್ಕೆ ಮರಳಿದ್ದಾರೆ. ಪಠಾಣ್ ಚಿತ್ರದ ವಿಶೇಷ ಹಾಡಿಗಾಗಿ ದೀಪಿಕಾ ಪಡುಕೋಣೆ ಜೊತೆ ಚಿತ್ರೀಕರಣದಲ್ಲಿ ತೊಡಗಿದ್ದರು.