ಜಿಂಕೆ ಬೇಟೆಯಾಡಿದ್ದವರ ಬಂಧನ

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಿಂಕೆ ಕೊಂದು ತಲೆ ಮತ್ತು ಕಾಲನ್ನು ಸಾಗಿಸಲು ಯತ್ನಿಸುತ್ತಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಬಂಧಿಸಿದ್ದಾರೆ.
ತಾಲೂಕಿನ ರಾಚಪ್ಪಾಜಿ ನಗರದ ನಿವಾಸಿ ಮಾದಪ್ಪ (53,) ಹೊಳಸಾಲ (53), ಸುಂಡ್ರಹಳ್ಳಿ ಕೃಷ್ಣ ( 32) ಬಂಧಿತರು. ಜಿಂಕೆ ಬೇಟೆಯಾಡಲೆಂದು ಉರುಳು ಹಾಕಿದ್ದ ಹಂತಕರು ಜಿಂಕೆ ಕೊಂದು ಅದರ ಕಾಲು, ತಲೆ, ಚರ್ಮವನ್ನು ಬೇರೆ ಕಡೆ ಸಾಗಿಸಲು ಮುಂದಾಗಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಬಂಧಿಸಿದ್ದಾರೆ.
ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.