ಜಾತಿಗಣತಿ ವರದಿ ಒಪ್ಪಿಕೊಳ್ಳಲು ಆಗ್ರಹ; ಸೆ.3ಕ್ಕೆ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಧರಣಿ ಸತ್ಯಾಗ್ರಹ

ಜಾತಿಗಣತಿ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಆಗ್ರಹಿಸಿರುವ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಸೆಪ್ಟೆಂಬರ್ 3ರಂದು ಹೋರಾಟಕ್ಕೆ ಕರೆ ನೀಡಿದೆ. ಸಿದ್ದರಾಮಯ್ಯ ಅಧಿಕಾರವಧಿಯಲ್ಲಿ ರಾಜ್ಯದಲ್ಲಿನ ಜಾತಿಗಳ ಗಣತಿಗೆ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚಿಸಲಾಗಿತ್ತು. ಆಯೋಗ ರಾಜ್ಯಾದ್ಯಂತ ಮಾಹಿತಿ ಸಂಗ್ರಹಿಸಿ ಈಗ ವರದಿ ನೀಡಿದ್ದು, ರಾಜ್ಯ ಬಿಜೆಪಿ ಸರ್ಕಾರ ಅದನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದೆ ಎನ್ನಲಾಗಿದೆ. ಹೀಗಾಗಿ ಸೆಪ್ಟೆಂಬರ್ 3ರಂದು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಹಿಂದುಳಿದ ವರ್ಗಗಳ ಜಾತಿಗಣತಿ ವರದಿಯನ್ನು ಸರ್ಕಾರ ಪಡೆಯಬೇಕು ಹಾಗೂ ಪ್ರಬಲ ಜಾತಿಗಳು 2ಎ ವರ್ಗಕ್ಕೆ ಸೇರುತ್ತಿರುವ ಕ್ರಮವನ್ನು ವಿರೋಧಿಸಿ ಧರಣಿ ಸತ್ಯಾಗ್ರಹ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 3ರಂದು ತುಮಕೂರು ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಕೆಎಂ ರಾಮಚಂದ್ರಪ್ಪ ಹೇಳಿದರು. ತುಮಕೂರು ನಗರದ ಹೊಯ್ಸಳ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಜಾತಿ ಗಣತಿ ವರದಿ, ಅನೇಕ ಕೆಳ ಹಂತದ ಜಾತಿಗಳ ಸಾಂಸ್ಕೃತಿಕ, ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗಗೆ ಸಹಕಾರಿಯಾಗಲಿದೆ. ಆದ್ದರಿಂದ ಹಿಂದುಳಿದ ಸಮುದಾಯದ ಎಲ್ಲಾ ಮುಖಂಡರುಗಳು ಸೆಪ್ಟೆಂಬರ್ 3 ರಂದು ನಡೆಯುವ ಧರಣಿ ಸತ್ಯಾಗ್ರಹವನ್ನು ಭಾಗಿಯಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ, ಮಾಧ್ಯಮ ಸಲಹೆಗಾರರಾದ ಸಾಂಬಸದಾಶಿವ ರೆಡ್ಡಿ ಹಾಗೂ ತುಮಕೂರು ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕರುಗಳಾದ ಧನಿಯಾ ಕುಮಾರ್, ಪ್ರೆಸ್ ರಾಜಣ್ಣ ಕೆಂಪರಾಜು ಕರ್ನಾಟಕ ಪ್ರದೇಶ ಕುರುಬರ ಸಂಘದ ಆಂತರಿಕ ಲೆಕ್ಕ ಪರಿಶೋಧಕ ಸಿ ಪುಟ್ಟರಾಜು ನಿರ್ದೇಶಕರುಗಳಾದ ಟಿ ಇ ರಘುರಾಮ್ ರವಿಕುಮಾರ್ ಎನ್ ಸಿ ನಾಗರಾಜು ಪ್ರಜಾಪ್ರಗತಿ ದಿನ ಪತ್ರಿಕೆಯ ಸಹ ಸಂಪಾದಕರಾದ ಟಿ ಎನ್ ಮಧುಕರ್ ಶಿರಾಗೇಟ್ , ತಿಗಳ ಸಮಾಜದ ಸಿದ್ದಗಂಗಯ್ಯ, ಮಡಿವಾಳ ಸಮಾಜದ ಶಾಂತಕುಮಾರ್, ಸವಿತಾ ಸಮಾಜದ ಪಾರ್ಥಸಾರಥಿ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರುಗಳು, ಯುವ ನಾಯಕರುಗಳು ಸಭೆಯಲ್ಲಿ ಭಾಗವಹಿಸಿದ್ದರು.