ಖಾಸಗಿ ಶಾಲೆಗಳ ಶೇ.15 ರಷ್ಟು ಶುಲ್ಕ ಕಡಿತಕ್ಕೆ ರಾಜ್ಯ ಹೈಕೋರ್ಟ್ ಆದೇಶ

ಬೆಂಗಳೂರು: ಖಾಸಗಿ ಶಾಲೆಗಳ ಬೋಧನಾ ಶುಲ್ಕವನ್ನು ಶೇ.15ರಷ್ಟು ಕಡಿತ ಮಾಡಿ ಹೈಕೋರ್ಟ್ ಆದೇಶ ಮಾಡಿದೆ. ರಾಜ್ಯ ಸರ್ಕಾರದ ಶೇ.30ರಷ್ಟು ಶಾಲಾ ಶುಲ್ಕ ಕಡಿತ ಮಾಡಿದ್ದ ಕ್ರಮವನ್ನು ವಿರೋಧಿಸಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ 2020-21ನೆ ಸಾಲಿಗೆ ಬೋಧನಾ ಶುಲ್ಕವನ್ನು ಶೇ.15ರಷ್ಟು ಕಡಿತಗೊಳಿಸಿ ಆದೇಶಿಸಿದೆ.

ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್ ಕಾರಣ ಶಾಲೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಆನ್‍ಲೈನ್ ಮೂಲಕ ಶಾಲೆಗಳು ನಡೆದಿದ್ದವು.ಶಾಲಾ ಶುಲ್ಕವನ್ನು ಕಡಿತ ಮಾಡಬೇಕೆಂದು ಪೋಷಕರ ಸಂಘಟನೆಗಳು ಸರ್ಕಾರದ ಮೊರೆ ಹೋಗಿದ್ದವು. ಹೀಗಾಗಿ ರಾಜ್ಯ ಸರ್ಕಾರ ಶೇ.30ರಷ್ಟು ಬೋಧನಾ ಶುಲ್ಕ ಕಡಿತಗೊಳಿಸಿ ಆದೇಶ ನೀಡಿತ್ತು.

ಆದರೆ ಸಿಬ್ಬಂದಿಗೆ ವೇತನ ನೀಡುವುದು ಸೇರಿದಂತೆ ಶಾಲೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಶುಲ್ಕ ಕಡಿತ ಮಾಡಬಾರದು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿ ಸರ್ಕಾರದ ಆದೇಶದ ವಿರುದ್ಧ ನ್ಯಾಯಾಲಯದ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಶೇ.15ರಷ್ಟು ಶುಲ್ಕವನ್ನು ಕಡಿತಗೊಳಿಸಿ ಆದೇಶ ನೀಡಿದೆ. ಪದವಿ ಕಾಲೇಜು, ಪದವಿ ಪೂರ್ವ ಕಾಲೇಜುಗಳು, ಪ್ರೌಢಶಾಲೆಗಳು, 6 ರಿಂದ 8ನೆ ತರಗತಿವರೆಗಿನ ಶಾಲೆಗಳು ಆರಂಭಗೊಂಡಿದ್ದು, ನ್ಯಾಯಾಲಯದ ಈ ತೀರ್ಪು ಸಾಕಷ್ಟು ಪೋಷಕರಿಗೆ ಅನುಕೂಲವಾಗುವ ಸಾಧ್ಯತೆ ಇದೆ.