ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ಪರಿಹಾರ

 ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ಪರಿಹಾರ

ಬಡತನ ರೇಖೆಗಿಂತ ಕಡಿಮೆ ಮಟ್ಟದಲ್ಲಿರುವ ಕುಟುಂಬದ ದುಡಿಯುವ ಸದಸ್ಯರು ಕೋವಿಡ್ – 19ರ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದಲ್ಲಿ 1 ಲಕ್ಷ ರೂ. ಪರಿಹಾರಧನವನ್ನು ನೀಡಲು ಸರ್ಕಾರ ಆದೇಶಿಸಿದ್ದು, ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌ ತಿಳಿಸಿದ್ದಾರೆ.

ಆಯಾ ತಾಲೂಕು ಕಚೇರಿಗಳಲ್ಲಿ ಅರ್ಜಿ ಪಡೆದು ನಿಗದಿತ ನಮೂನೆಗಳಲ್ಲಿ ಭರ್ತಿ ಮಾಡಿ, ಕೋವಿಡ…-19 ವೈರಾಣು ಸೋಂಕಿನಿಂದ ಮೃತಪಟ್ಟಿರುವುದಕ್ಕೆ ಸಂಬಂಧಿಸಿದಂತೆ ಪ್ರಯೋಗಾಲಯದಿಂದ ಅಧಿಕೃತವಾಗಿ ಗುರುತಿಸಿದ ಕೋವಿಡ್‌ ಪಾಸಿಟಿವ್‌ ವರದಿ, ಕೋವಿಡ್‌ ದೃಢಪಟ್ಟರೋಗಿಯ ಸಂಖ್ಯೆ ಹಾಗೂ ವೈದ್ಯರಿಂದ ದೃಢೀಕರಣ ಮಾಡಿಸಿ ಅರ್ಜಿಯನ್ನು ಸಲ್ಲಿಸಬೇಕು ಅಥವಾ ರೋಗಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ಪಡೆದವರು (ಕೋವಿಡ್-19 ನೆಗಟಿವ್‌ ಇದ್ದವರು) ಕ್ಲಿನಿಕಲ್‌ ರೇಡಿಯಾಲಜಿ ಮತ್ತು ಇತರೆ ಸಂಬಂಧಿಸಿದ ಪ್ರಯೋಗಾಲಯ ವರದಿ ಸಲ್ಲಿಸಬೇಕು.

ಅರ್ಜಿಯ ಜೊತೆಗೆ ಮೃತಪಟ್ಟವರ ಆರ್ಧಾ ಕಾರ್ಡ್‌ ಪ್ರತಿ, ಮರಣ ಪ್ರಮಾಣ ಪತ್ರದ ಪ್ರತಿ, ಅರ್ಜಿದಾರರ ಪಡಿತರ ಚೀಟಿ ಪ್ರತಿ, ಅರ್ಜಿದಾರರ ಆರ್ಧಾ ಕಾರ್ಡ್‌ ಪ್ರತಿ, ಬ್ಯಾಂಕ್‌ ಪಾಸ್‌ ಪುಸ್ತಕದ ಪ್ರತಿ, ಅರ್ಜಿ ನಮೂನೆ-1ರಲ್ಲಿ ಮಾಹಿತಿ, ನಮೂನೆ-2ರಲ್ಲಿ ಸ್ವಯಂ ಘೋಷಣಾ ಪತ್ರ, ನಮೂನೆ 3ರಲ್ಲಿ ಕುಟುಂಬ ಸದಸ್ಯರ ನಿರಾಕ್ಷೇಪಣಾ ಪತ್ರಗಳನ್ನು ಸಲ್ಲಿಸಬೇಕು.

ಈ ಮೇಲಿನ ದಾಖಲೆಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿ ಅಥವಾ ತಾಲೂಕು ಆರೋಗ್ಯ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ತಾಲ್ಲೂಕು ಕಚೇರಿಯನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ