ಕೊರೋನಾ ಪ್ರಕರಣಗಳ ಹೆಚ್ಚಳ: ಬೆಂಗಳೂರಿನಲ್ಲಿ ಆ.30 ರವರೆಗೆ ನೈಟ್ ಕರ್ಪ್ಯೂ ವಿಸ್ತರಣೆ

 ಕೊರೋನಾ ಪ್ರಕರಣಗಳ ಹೆಚ್ಚಳ: ಬೆಂಗಳೂರಿನಲ್ಲಿ ಆ.30 ರವರೆಗೆ ನೈಟ್ ಕರ್ಪ್ಯೂ ವಿಸ್ತರಣೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಳವಾಗುತ್ತಿದೆ, ಅದರಲ್ಲೂ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮೂರನೇ ಅಲೆಯ ಆತಂಕ ಸೃಷ್ಟಿಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಗಸ್ಟ್ 30 ರವರೆಗೆ ನೈಟ್ ಕರ್ಪ್ಯೂ ವಿಸ್ತರಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದು, ಕೊರೊನಾ ಮೂರನೇ ಅಲೆ ಭೀತಿ ಹಿನ್ನೆಲೆ ಕೊರೊನಾ ಸೋಂಕಿನ ಪ್ರಕರಣಗಳಿಗೆ ಕಡಿವಾಣ ಹಾಕಲು ಬೆಂಗಳೂರಿನಲ್ಲಿ ಆಗಸ್ಟ್ 30 ರವರೆಗೆ ನೈಟ್ ಕರ್ಪ್ಯೂ ವಿಸ್ತರಿಸಲಾಗಿದೆ. ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಪ್ಯೂ ಆದೇಶ ಜಾರಿಯಲ್ಲಿರಲಿದೆ ಎಂದಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು  ನಗರದಲ್ಲಿ ರಾತ್ರಿ ಕರ್ಫ್ಯೂ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ರಾತ್ರಿ 9 ಗಂಟೆಗೆ ಅಂಗಡಿಗಳು ಬಾಗಿಲು ಮುಚ್ಚುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ. ಕೋವಿಡ್ 3ನೇ ಅಲೆ ಹರಡುವಿಕೆ ತಡೆಯಲು ರಾತ್ರಿ 9 ಗಂಟೆಯ ಬಳಿಕ ಅಂಗಡಿ, ಶಾಪ್‌ಗಳನ್ನು ತೆರೆದರೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.