ಕೊರೋನಾಗೆ ಹಾಟ್ ಸ್ಪಾಟ್ ಆದ ಗಡಿ ಜಿಲ್ಲೆಗಳು: ಬೆಂಗಳೂರು ಹೊರವಲಯದಲ್ಲಿ ಹೆಚ್ಚಾದ ಕೋವಿಡ್

ರಾಜ್ಯದಲ್ಲಿ ಕೊರೋನಾ ವೈರಸ್ ಅಬ್ಬರ ಕಡಿಮೆಯಾಗುತ್ತಿದ್ದರೂ, ಗಡಿ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಈಗಾಗಲೇ ಕೇರಳ ಗಡಿಗೆ ಹೊಂದಿಕೊಂಡಿರುವ ಮಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ರಾಜಧಾನಿ ಬೆಂಗಳೂರನ್ನೂ ಮೀರಿಸಿದೆ. ದೇವರನಾಡು ಕೇರಳದಲ್ಲಿ ಕೊರೋನಾ ಸೋಂಕಿತ ಸಂಖ್ಯೆ ಹೆಚ್ಚಾಗುತ್ತಿದ್ದು, ಕಡಲ ನಗರಿ ಮಂಗಳೂರಿನಲ್ಲಿ ಇದರ ಪರಿಣಾಮ ಬೀರುತ್ತಿದೆ. ಇತ್ತ ಮಹಾರಾಷ್ಟ್ರದಲ್ಲಿ ಕೋವಿಡ್ ಹೆಚ್ಚಾಗುತ್ತಿದ್ದು, ಗಡಿ ಜಿಲ್ಲೆಗಳಾದ ಬೆಳಗಾವಿ, ಕಲಬುರ್ಗಿ, ವಿಜಯಪುರ ಜಿಲ್ಲೆಗಳಲ್ಲಿ ವೈರಸ್ ಆತಂಕ ಹೆಚ್ಚಿದೆ.
ಗಡಿ ಜಿಲ್ಲೆಗಳಲ್ಲಿ ಸರ್ಕಾರ ಎಷ್ಟೇ ಬಿಗಿ ಕ್ರಮಗಳನ್ನು ಕೈಗೊಂಡಿದ್ದರೂ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಸೃಷ್ಟಿಸಿದೆ. ಈಗಾಗಲೇ ಮೂರನೆ ಅಲೆಯ ಭೀತಿಯಲ್ಲಿರುವ ರಾಜ್ಯಕ್ಕೆ, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ಮತ್ತೆ ವ್ಯಾಪಕವಾಗಿ ಹರಡುತ್ತಿರುವುದು, ತಲೆನೋವಾಗಿ ಪರಿಣಮಿಸಿದೆ. ಈ ಮಧ್ಯೆ ಬೆಂಗಳೂರಿನ ಹೊರವಲಯಗಳಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಮತ್ತಷ್ಟು ಭಯ ತಂದೊಡ್ಡಿದೆ.
ಗಡಿ ವಾರ್ಡ್ ಗಳಲ್ಲಿ ಹೆಚ್ಚಿದ ಕೊರೋನಾ ವೈರಸ್
ಅತ್ತ ಗಡಿ ಜಿಲ್ಲೆಗಳಲ್ಲಿ ವೈರಸ್ ವ್ಯಾಪಕವಾಗಿ ಹರಡುತ್ತಿದ್ದರೆ, ಇತ್ತ ರಾಜಧಾನಿ ಬೆಂಗಳೂರಿನ ಗಡಿ ವಾರ್ಡ್ ಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 10 ದಿನದ ಅವಧಿಯಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾಗಿರೋ ವಾಡ್ ಗಳನ್ನ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಪಟ್ಟಿಮಾಡಿದ್ದಾರೆ. ಇದರಲ್ಲಿ ಟಾಪ್ 10 ವಾರ್ಡ್ ಗಳಲ್ಲಿ ಜನಸಾಂದ್ರತೆ ಅತೀ ವಿರಳವಾಗಿದೆ. ಬೆಂಗಳೂರು ಕೇಂದ್ರ ಭಾಗದಿಂದ ಹೊರಗಿರುವ ಬೇಗೂರು, ಬೆಳ್ಳಂದೂರು, ರಾಜರಾಜೇಶ್ವರಿ ನಗರ, ಹೂಡಿ, ಹಗದೂರು, ವರ್ತೂರು, ಹೊರಮಾವು, ಬಸವನಪುರ, ಹೆಮ್ಮಿಗೆ ಪುರ, ವಿದ್ಯಾರಣ್ಯಪುರ ವಾರ್ಡ್ಗಳು ರೆಡ್ ಝೋನ್ ಗಳಾಗಿವೆ. ಈ ವಾರ್ಡ್ ಗಳಲ್ಲಿ ಹೊರ ರಾಜ್ಯದ ಜನರು ಹೆಚ್ಚಾಗಿದ್ದು, ಕೊರೋನಾ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.
ಬೆಂಗಳೂರು ಕೇಂದ್ರ ಭಾಗದಲ್ಲಿ ತಗ್ಗಿದ ಕೊರೋನಾ ಅಬ್ಬರ
ಇನ್ನು ಬಹಳ ಸಂತಸದ ಸುದ್ದಿ ಅಂದ್ರೆ ನಗರದ ಕೇಂದ್ರ ಭಾಗದ ವಾರ್ಡ್ಗಳಲ್ಲಿ ಕೊರೋನಾ ಶೂನ್ಯಕ್ಕೆ ಇಳಿದಿದೆ. ಮೊದಲ ಹಾಗೂ ಎರಡನೇ ಅಲೆಯಲ್ಲಿ ರೆಡ್ ಝೋನ್ ನಲ್ಲಿದ್ದ, ಕುಶಾಲನಗರ, ಲಕ್ಷ್ಮೀದೇವಿ ನಗರ, ಮುನೇಶ್ವರ ನಗರ, ಸಗಾಯ್ ಪುರ, ಕಾಟನ್ ಪೇಟೆ, ಜಗಜೀವನ್ ರಾಮ್ ನಗರ, ರಾಯ್ ಪುರ, ಲಕ್ಕಸಂದ್ರ, ಭೈರಸಂದ್ರ, ಗುರಪ್ಪನ ಪಾಳ್ಯ ವಾರ್ಡ್ಗಳಲ್ಲಿ ಕಳೆದ 10 ದಿನಗಳಿಂದ ಝೀರೋ ಕೊರೋನಾ ಕೇಸ್ ದಾಖಲಾಗ್ತಿದೆ. ಈ ಹಿಂದೆ ಇದೇ ವಾರ್ಡ್ ಗಳಲ್ಲಿ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದವು. ಈಗ ಕೊರೋನಾ ಕೇಸ್ ದಾಖಲಾಗದ ಹಿನ್ನೆಲೆಯಲ್ಲಿ ಈ ವಾರ್ಡ್ಗಳನ್ನ ಪಾಲಿಕೆ ಗ್ರೀನ್ ಝೋನ್ ಎಂದು ಗುರುತಿಸಿದೆ.