ಕೃಷ್ಙಮೂರ್ತಿ ನಿಧನ ಅರ್ಥಶಾಸ್ತ್ರ ಸಾಹಿತ್ಯಕ್ಕೆ ನಷ್ಟ * ಡಾ.ಬಿ. ಗೋಪಾಲ್ ಸಿಂಗ್ ಸಂತಾಪ * ಮಹಾರಾಣಿ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆ

 ಕೃಷ್ಙಮೂರ್ತಿ ನಿಧನ ಅರ್ಥಶಾಸ್ತ್ರ ಸಾಹಿತ್ಯಕ್ಕೆ ನಷ್ಟ * ಡಾ.ಬಿ. ಗೋಪಾಲ್ ಸಿಂಗ್ ಸಂತಾಪ * ಮಹಾರಾಣಿ ಕಾಲೇಜಿನಲ್ಲಿ ಶ್ರದ್ಧಾಂಜಲಿ ಸಭೆ

ಮೈಸೂರು:ಡಾ.ಎಚ್.ಆರ್. ಕೃಷ್ಣಮೂರ್ತಿ ಹೊಸಬೀಡು ಅವರ ಸಾವು ಅರ್ಥಶಾಸ್ತ್ರ ಸಾಹಿತ್ಯಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ಅರ್ಥಶಾಸ್ತ್ರ ನಿವೃತ್ತ ಪ್ರಾಧ್ಯಾಪಕ ಡಾ.ಬಿ. ಗೋಪಾಲ್ ಸಿಂಗ್ ವಿಷಾದ ವ್ಯಕ್ತಪಡಿಸಿದರು.

ನಗರದ ಮಹಾರಾಣಿ ಕಲಾ ಕಾಲೇಜಿನ ಸ್ನಾತಕೋತ್ತರ ಅಧ್ಯಯನ ಕೆಂದ್ರದಲ್ಲಿ ಮೈಸೂರು ಅರ್ಥಶಾಸ್ತ್ರ ಅಧ್ಯಾಪಕರ ಸಂಘ, ಮಹಾರಾಣಿ ಕಲಾ ಕಾಲೇಜು, ಸ್ನಾತಕೋತ್ತರ ಕೇಂದ್ರದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಡಾ.ಎಚ್.ಆರ್. ಕೃಷ್ಣಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.

ನಾನು ಕಂಡ ಜನಪ್ರಿಯ ಅರ್ಥಶಾಸ್ತ್ರ ಬರಹಗಾರರು, ಜನಪರ ಆಲೋಚಕರಾಗಿದ್ದ ಡಾ.ಎಚ್.ಆರ್. ಕೃಷ್ಣಮೂರ್ತಿ ಅವರ ಮಿಲ್ಲೇನಿಯಂ ಪುಸ್ತಕ ಹೆಚ್ಚು ಪ್ರಖ್ಯಾತವಾಗಿದೆ. ಅವರು ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಿದ್ದರು. ಕೇವಲ 62 ವರ್ಷಕ್ಕೆ ಅವರು ನಿಧನರಾಗಿರುವುದು ಅರ್ಥಶಾಸ್ತ್ರಕ್ಕೆ, ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟ ಎಂದು ಬೇಸರಿಸಿದರು.

ಪ್ರಾಂಶುಪಾಲ ಶ್ರೀನಿವಾಸ್ ಮಾತನಾಡಿ, ಕೃಷ್ಣಮೂರ್ತಿ ಅವರ ಹೆಸರಿನಲ್ಲಿ ಮೈಸೂರು ಅರ್ಥಶಾಸ್ತ್ರ ಅಧ್ಯಾಪಕರ ಸಂಘವು ಪ್ರತಿ ವರ್ಷವೂ ಒಂದು ವಿಚಾರಸಂಕಿರಣ ಏರ್ಪಡಿಸಬೇಕು. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಪಾಲಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಸ್ನಾತಕೋತ್ತರ ಕೇಂದ್ರದ ಸಂಯೋಜಕರಾದ, ಬನುಮಯ್ಯ ಕಾಲೇಜಿನ ಪ್ರಾಂಶುಪಾಲ ಹಿರಣ್ಣಯ್ಯ, ಸಂಘದ ಅಧ್ಯಕ್ಷ ಪ್ರೊ.ಪುಟ್ಟಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೀನಾ ನಾಯಕ್, ಅರ್ಥಶಾಸ್ತ್ರ ಪ್ರಾಧ್ಯಾಪಕ, ಲೇಖಕ ಡಾ.ನೇ.ತಿ. ಸೋಮಶೇಖರ್, ಸಹ ಪ್ರಾಧ್ಯಾಪಕಿ ವಿಜಯಲಕ್ಷ್ಮೀ ಇತರರಿದ್ದರು.