ಕೃಷಿ ಕಾಯ್ದೆ ವಿರೋಧಿಸಿ ಸೆ. 27ರಂದು ಭಾರತ್ ಬಂದ್; ರೈತರ ಹೋರಾಟಕ್ಕೆ 500ಕ್ಕೂ ಸಂಘಟನೆಗಳ ಬಲ

ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಬೀದಿಗಿಳಿಯಲು ರೈತ ಸಂಘಟನೆಗಳು ಸಜ್ಜಾಗಿವೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆ ವಿರುದ್ಧ ರೈತಪರ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಇದೇ ಸೆ. 27ರಂದು ಭಾರತ್ ಬಂದ್ ನಡೆಸಲು ರಾಷ್ಟ್ರೀಯ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದೆ. ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‌ಗೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿವೆ. ಈ ಭಾರತ್ ಬಂದ್‌ಗೆ ತಮಿಳುನಾಡಿನಲ್ಲಿ ಸಂಪೂರ್ಣ ಬೆಂಬಲ ಸೂಚಿಸಲಾಗಿದ್ದು, ಕರ್ನಾಟಕದಲ್ಲೂ ಭಾರತ್ ಬಂದ್ ಪರಿಣಾಮ ಬೀರಲಿದೆ. ರಾಜ್ಯದಲ್ಲಿನ ಸಂಯುಕ್ತ ಕಿಸಾನ್ ಮೋರ್ಚಾ, ಕರ್ನಾಟಕದ ಕಬ್ಬು ಬೆಳೆಗಾರರ ಸಂಘ, ರೈತ ಸಂಘ, ಹಸಿರು ಸೇನೆ, ಹಲವು ರೈತ ಸಂಘಟನೆಗಳು ಸೇರಿ 500ಕ್ಕೂ ಹೆಚ್ಚು ಸಂಘಟನೆಗಳು ಭಾರತ್ ಬಂದ್‌ಗೆ ಬೆಂಬಲ ನೀಡಿವೆ.
ದೇಶದಾದ್ಯಂತ ರೈತಪರ ಸಂಘಟನೆಗಳು ಪ್ರತಿಭಟನೆ, ಧರಣಿ, ಮೆರವಣಿಗೆ ನಡೆಸಲಿವೆ. ಬೆಂಗಳೂರು ಮತ್ತು ರಾಜ್ಯದ ಇತರೆ ಪ್ರಮುಖ ಜಿಲ್ಲೆಗಳಲ್ಲಿಯೂ ಸಂಘಟನೆಗಳು ಮೆರವಣಿಗೆ ಹಮ್ಮಿಕೊಂಡಿದ್ದು, ಸಹಜವಾಗಿ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಈ ಸಂಬಂಧ ಈಗಾಗಲೇ ಸಂಘಟನೆಗಳು ಸಭೆಗಳನ್ನು ನಡೆಸಿ ಭಾರತ ಬಂದ್ ದಿನದ ಪ್ರತಿಭಟನೆ ಯಾವ ಸ್ವರೂಪದಲ್ಲಿ ಇರಬೇಕು ಎಂಬುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಿವೆ. ಅಲ್ಲದೆ, ಬ್ಯಾಂಕ್ ನೌಕರರು, ಸಾರಿಗೆ ಸಿಬ್ಬಂದಿ, ಆಟೋ ಮತ್ತು ಕ್ಯಾಬ್ ಚಾಲಕರ ಸಂಘಟನೆಗಳ ನೆರವನ್ನೂ ಕೋರಿದ್ದು, ಇದರಿಂದ ಜನಸಾಮಾನ್ಯರಿಗೆ ಪ್ರತಿಭಟನೆಯ ಉದ್ದೇಶ ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಸೋಮವಾರ ನಡೆಯಲಿರುವ ಭಾರತ್ ಬಂದ್ನಿಂದ ಕರ್ನಾಟಕದಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಸಂಚಾರದಲ್ಲೇನೂ ವ್ಯತ್ಯಾಸ ಉಂಟಾಗುವುದಿಲ್ಲ. ಕ್ಯಾಬ್, ಆಟೋ, ಟ್ಯಾಕ್ಸಿಗಳು ನೈತಿಕ ಬೆಂಬಲವನ್ನಷ್ಟೇ ನೀಡಿದ್ದು, ಸಂಚಾರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ.
ಕರ್ನಾಟಕದ ಹೋಟೆಲ್ ಮಾಲೀಕರ ಸಂಘ ಈ ಭಾರತ್ ಬಂದ್‌ಗೆ ಬೆಂಬಲ ಘೋಷಿಸುವ ಸಾಧ್ಯತೆಯಿದೆ. ಲಾರಿ ಮಾಲೀಕರು ಕೂಡ ಬೆಂಬಲ ಘೋಷಿಸುವ ಸಾಧ್ಯತೆಯಿದೆ.
ಕೇಂದ್ರದ ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ಯಾಕೆ?
ರೈತರ ಉತ್ಪಾದನೆ, ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ ಒಪ್ಪಂದ) ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಯ ವಿರುದ್ಧ ರೈತರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾಸಯ್ದೆಗಳಿಂದ ಕೃಷಿ ಕ್ಷೇತ್ರದಲ್ಲಿ ಬೃಹತ್ ಉದ್ಯಮಗಳ ಪ್ರವೇಶಕ್ಕೆ ಅನುಕೂಲವಾಗಲಿದ್ದು, ಬಡ ರೈತರು ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದ್ದಾರೆ ಎಂಬುದು ರೈತರ ಆರೋಪ. ವಿವಾದಿತ ಕೃಷಿ ಕಾನೂನು ಜಾರಿ ವಿರುದ್ಧ ಕಳೆದ ವರ್ಷದ ಡಿಸೆಂಬರ್‌ನಲ್ಲಿಯೂ ಸಹ ಕರೋನಾ ಮಧ್ಯೆಯೇ ಭಾರತ ಬಂದ್ ನಡೆಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗಿತ್ತು. ತದನಂತರ ಕಳೆದ ಮಾರ್ಚ್ 26ರಂದು ಸಹ ಭಾರತ ಬಂದ್‌ಗೆ ಕರೆ ನೀಡಲಾಗಿತ್ತು. ಈಗ ಮತ್ತೊಮ್ಮೆ ಭಾರತ ಬಂದ್ ಕರೆ ನೀಡುವ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡಲು ಮುಂದಾಗಿವೆ.
ಬಂದ್ ಹಿನ್ನಲೆ ಏನಿರುತ್ತದೆ? ಏನಿರಲ್ಲ?:
ಭಾರತ್ ಬಂದ್ ಹಿನ್ನೆಲೆಯಲ್ಲಿ ಹಾಲು, ತರಕಾರಿ, ಮೆಡಿಕಲ್ ಹೀಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ. ಸಾರಿಗೆ ಸಿಬ್ಬಂದಿ, ಆಟೋ, ಕ್ಯಾಬ್ ಚಾಲಕರು ಇದುವರೆಗೆ ಬೆಂಬಲ ವ್ಯಕ್ತಪಡಿಸಿಲ್ಲವಾದರೂ ಅಂದು ಪ್ರತಿಭಟನೆಯಲ್ಲಿ ಭಾಗಿಯಾಗುವುದು ಅನುಮಾನ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ರಾಷ್ಟ್ರೀಕೃತ ಬ್ಯಾಂಕ್‌ಗಳ ಕಾರ್ಯಚಟುವಟಿಕಯಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಇನ್ನೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.