ಕಾಟಿ ಎಂಬ ಬಲಿಷ್ಠ

– ಸಂಜಯ್ ಹೊಯ್ಸಳ
ಕಾಟಿ/ಕಾಡೆಮ್ಮೆ ಎಂದೇ ಕರೆಸಿಕೊಳ್ಳುವ ಇದು ಗೋವಾದ ರಾಜ್ಯ ಪ್ರಾಣಿ. ಕಾಡಲ್ಲಿ ಇದು ಹುಲಿಗಳ ಪ್ರಮುಖ ಬಲಿ ಪ್ರಾಣಿ. ನೋಡಲು ಇದು ಎಮ್ಮೆಯಂತಿದ್ದರೂ ವಾಸ್ತವವಾಗಿ ಎತ್ತಿನ ಜಾತಿಗೆ (Bovidae) ಸೇರಿದ ಪ್ರಾಣಿ. ಟನ್ ಗಟ್ಟಲೇ ತೂಕ ಹೊಂದಿದ ಕಾಟಿಗೆ ಕಾಡಲ್ಲಿ ಹುಲಿ ಬಿಟ್ಟರೆ ಬೇರೆ ಬೇಟೆಗಾರ ಪ್ರಾಣಿ ಇಲ್ಲ. ವಯಸ್ಕ ಗಂಡು ಕಾಟಿ ಒಂಟಿಯಾಗಿದ್ದರೆ, ಉಳಿದವು ಸದಾ ಗುಂಪಿನಲ್ಲಿ ಕೌಟುಂಬದ ರೀತಿ ವಾಸಿಸುತ್ತವೆ.
ಅಪಾಯದಂಚಿನಲ್ಲಿರುವ ಪ್ರಾಣಿಗಳಲ್ಲಿ ಒಂದಾದ ಈ ಪ್ರಾಣಿ ಭಾರತದ ಪ್ರಮುಖ ಸಂರಕ್ಷಿತ ಪ್ರದೇಶಗಳಲ್ಲಿ ಒಂದಾದ ಮಧ್ಯಪ್ರದೇಶದ ಬಂದವಘರ್ ಅರಣ್ಯದಲ್ಲಿ 1995ರ ವೇಳೆಗೆ ಸಂಪೂರ್ಣವಾಗಿ ನಾಶವಾಗಿತ್ತು. ನಂತರ 2011ರಲ್ಲಿ ಅಲ್ಲಿ ಮರುಪರಿಚಯ (Reintroduce) ಯೋಜನೆಯ ಮೂಲಕ ಅಲ್ಲಿ ಮತ್ತೆ ಕಾಟಿಗಳ ಸಂತತಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ನಮ್ಮಲ್ಲಿ ಬಹಳಷ್ಟು ಜನರಿಗೆ ರಾಜಸ್ಥಾನದ ಸಾರಿಸ್ಕ ಹಾಗೂ ಮಧ್ಯಪ್ರದೇಶದ ಪನ್ನಾ ಅರಣ್ಯ ಪ್ರದೇಶದಲ್ಲಿ ಹುಲಿಗಳ ಮರುಪರಿಚಯ ಯೋಜನೆ ಬಗ್ಗೆ ಗೊತ್ತು. ಆದರೆ, ಈ ಕಾಟಿಗಳ ಮರುಪರಿಚಯ ಯಶಸ್ಸಿನ ಯೋಜನೆಯ ಬಗ್ಗೆ ಗೊತ್ತಿಲ್ಲ! ವನ್ಯಜೀವಿಗಳಿಗೆ ಸಂಬಂಧಿಸಿದ ಇಂತಹ ಯಶಸ್ವಿ ಯೋಜನೆಗಳು ಈ ಬಗೆಗಿನ ಮತ್ತಷ್ಟು ಯೋಜನೆಗಳಿಗೆ ಸ್ಫೂರ್ತಿಯಾದರೆ ಉತ್ತಮ.