ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್: ಹೈಕಮಾಂಡ್ ಗೆ ಪಟ್ಟಿ ರವಾನೆ

ಬೆಂಗಳೂರು: ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆಗೆ ಸಿದ್ಧತೆ ನಡೆಸಿರುವ ಬಿಜೆಪಿ ಅಭ್ಯರ್ಥಿಗಳನ್ನು ಫೈನಲ್ ಮಾಡಲಾಗಿದ್ದು, ಪಟ್ಟಿಯನ್ನು ಹೈಕಮಾಂಡ್ ಗೆ ರವಾನಿಸಿದೆ. ಉಪಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಆಯ್ಕೆ ನಿಟ್ಟಿನಲ್ಲಿ ನಡೆದಿದ್ದ ಬಿಜೆಪಿ ಕೋರ್ ಕಮಿಟಿ, ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ.
ಕೋರ್ ಕಮಿಟಿ ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಹಾನಗಲ್ ಹಾಗೂ ಸಿಂದಗಿ ಕ್ಷೇತ್ರ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚೆ ನಡೆಯಿತು. ಸಭೆಯಲ್ಲಿ 3-4 ಜನರ ಹೆಸರನ್ನು ಪ್ರಸ್ತಾಪಿಸಲಾಗಿದೆ. ಹೆಸರನ್ನು ಫೈನಲ್ ಮಾಡಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೇಂದ್ರೀಯ ಸಮಿತಿಗೆ ಕಳಿಸುತ್ತಾರೆ. ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತೆ ಎಂದು ಹೇಳಿದರು.
ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವರದಿಗಳು ಬಂದಿವೆ. ಸಭೆಯಲ್ಲಿ ಆಂತರಿಕ-ಬಹಿರಂಗ ವರದಿ ಬಗ್ಗೆ ಚರ್ಚಿಸಲಾಗಿದೆ. ಎರಡೂ ಕ್ಷೇತ್ರಗಳಲ್ಲೂ ನಮ್ಮ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.