ಉಪಚುನಾಣೆ ಫಲಿತಾಂಶ ಭವಿಷ್ಯದ ದಿಕ್ಸೂಚಿ ಅಲ್ಲ; ಜೆಡಿಎಸ್ ಮುಖಂಡ ಕೆ.ವಿ.ಮಲ್ಲೇಶ್ ಹೇಳಿಕೆ

ಮೈಸೂರು: ಉಪಚುನಾಣೆ ಫಲಿತಾಂಶ ಭವಿಷ್ಯದ ದಿಕ್ಸೂಚಿ ಅಲ್ಲ ಎಂದು ಮೈಸೂರು ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಹೇಳಿದ್ದಾರೆ. ಫಲಿತಾಂಶದ ಬಗ್ಗೆ ಮಾತನಾಡಿದ ಅವರು, ಮತದಾರರ ತೀರ್ಪನ್ನು ಜೆಡಿಎಸ್ ಮನಃಪೂರ್ವಕವಾಗಿ ಗೌರವಿಸಲಿದೆ. ಆಡಳಿತಾರೂಢ ಪಕ್ಷ ಬಿಜೆಪಿಯ ಹಣಬಲ, ತೋಳ್ಬಲ ಹಾಗೂ ಕಾಂಗ್ರೆಸ್ ಪಕ್ಷದ ಕುತಂತ್ರ ರಾಜಕಾರಣಕ್ಕೆ ಜೆಡಿಎಸ್ ಬಲಿಯಾಗಿದೆ ಎಂದು ದೂರಿದರು.
ಮುಂದುವರೆದು ಜೆಡಿಎಸ್ ಅಭ್ಯರ್ಥಿಯನ್ನು ಕಾಂಗ್ರೆಸ್ ಪಕ್ಷ ಹೈಜಾಕ್ ಮಾಡಿ ಕರೆದುಕೊಂಡು ಹೋದರೆ, ಬಿಜೆಪಿ ಪಕ್ಷ ಹಣಬಲ, ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಈಗಾಗಲೇ ಸಾಕ್ಷಿ ಸಮೇತ ಜಗಜ್ಜಾಹಿರಾಗಿದೆ ಎಂದು ಆರೋಪಿಸಿದರು. ಪ್ರಸಕ್ತ ಉಪಚುನಾವಣೆಯಲ್ಲಿ ಜೆಡಿಎಸ್ ನಿರೀಕ್ಷಿತ ಮತಗಳಿಕೆಯಲ್ಲಿ ಹಿಂದೆ ಬೀಳಲು ಕುತಂತ್ರ ರಾಜಕಾರಣವೇ ಕಾರಣವೆಂಬ ಬಗ್ಗೆ ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.
ಈ ಫಲಿತಾಂಶ ಭವಿಷ್ಯದಲ್ಲಿ ನಡೆಯಬಹುದಾದ ಸಾಮಾನ್ಯ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂಬುದು ಮೂರು ಪಕ್ಷಗಳಿಗೆ ಗೊತ್ತಿರುವ ವಿಚಾರವೇ ಆಗಿದೆ. ಈ ಫಲಿತಾಂಶದಿಂದ ಭವಿಷ್ಯದ ಚುನಾವಣೆ ನಿರ್ಧರಿತವಾಗುವುದಿಲ್ಲ. ಆದರೆ ಈ ಫಲಿತಾಂಶ ಜೆಡಿಎಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪಾಠವಾಗಬೇಕು. ಸಾಮಾನ್ಯ ಚುನಾವಣೆಗೆ ಇನ್ನು ಕೇವಲ ಎರಡು ವರ್ಷ ಬಾಕಿ ಇದ್ದು, ಈಗಲೇ ನಾವೇಲ್ಲಾ ಟೊಂಕ ಕಟ್ಟಿ, ಪಕ್ಷದ ಪರವಾದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾದ ಅನಿವಾರ್‍ಯತೆ ಇದೆ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.