ಈಗ ತಮಿಳ್ನಾಡು ಗಡಿಯಲ್ಲೂ ಕಟ್ಟೆಚ್ಚರ

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಕೇರಳ ಬಳಿಕ ಇದೀಗ ರಾಜ್ಯದ ತಮಿಳುನಾಡಿನ ಗಡಿಭಾಗಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ರಾಮನಗರ, ಕೋಲಾರ, ಚಾಮರಾಜನಗರ ಜಿಲ್ಲೆಯ ಗಡಿಭಾಗಗಳಲ್ಲಿ ಅನೇಕ ಚೆಕ್‌ಪೋಸ್ಟ್‌ಗಳನ್ನು ರಚಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು ಕೋವಿಡ್‌ ನೆಗೆಟಿವ್‌ ವರದಿ ಇದ್ದರಷ್ಟೇ ರಾಜ್ಯಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗುತ್ತಿದೆ.

ತಮಿಳುನಾಡಿನೊಂದಿಗೆ ಗಡಿ ಹಂಚಿಕೊಂಡಿರುವ ರಾಮ​ನ​ಗರ ಜಿಲ್ಲೆಯ ಗಡಿ ಭಾಗದ ಗ್ರಾಮ​ಗ​ಳಾದ ಕನ​ಕ​ಪುರ ತಾಲೂ​ಕಿನ 4 ಕಡೆಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪನೆ ಮಾಡ​ಲಾ​ಗಿದೆ. ನೆರೆರಾಜ್ಯದಿಂದ ಬರುವ ಪ್ರತಿಯೊಂದು ವಾಹನದ ತಪಾಸಣೆ ನಡೆಸಲಾಗು​ತ್ತಿದ್ದು ಕೋವಿಡ್‌ ಪರೀಕ್ಷಾ ವರದಿ ಕಡ್ಡಾಯಗೊಳಿ​ಸ​ಲಾ​ಗಿದೆ.

ಕೋವಿಡ್‌ ಮೂರನೇ ಅಲೆಯ ಆತಂಕ ಹಿನ್ನೆಲೆಯಲ್ಲಿ ಕೊಡಗಿಗೆ ಪ್ರವಾಸ ಬರುವವರಿಗೆ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯ ಮಾಡಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಆದೇಶ ಹೊರಡಿಸಿದ್ದಾರೆ. ಆರ್‌ಟಿಪಿಸಿಆರ್‌ ನೆಗೆಟಿವ್‌ ರಿಪೋರ್ಟ್‌ ಇದ್ದರಷ್ಟೇ ಪ್ರವಾಸಿಗರಿಗೆ ಜಿಲ್ಲೆಗೆ ಅವಕಾಶ ನೀಡಲಾಗುತ್ತದೆ. ಹೋಂ ಸ್ಟೇ, ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಲೂ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯವಾಗಿ ಮಾಡಲಾಗಿದೆ. ಪ್ರವಾಸಿ ತಾಣಗಳ ವೀಕ್ಷಣೆಗೂ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯ ಮಾಡಲಾಗಿದ್ದು ಈ ನಿಯಮ ಆಗಸ್ವ್‌ 16ರವರೆಗೆ ಅನ್ವಯವಾಗಲಿದೆ.