ಆಗಸ್ಟ್ 29 ರಿಂದ ಮೈಸೂರು ರಸ್ತೆ- ಕೆಂಗೇರಿ ಮಾರ್ಗದ ನಡುವೆ ಮೆಟ್ರೋ ಸಂಚಾರ-ಸಿಎಂ ಬೊಮ್ಮಾಯಿರವರಿಂದ ಚಾಲನೆ

ಬೆಂಗಳೂರು: ಆಗಸ್ಟ್ 29 ರಿಂದ ಮೈಸೂರು ರಸ್ತೆ- ಕೆಂಗೇರಿ ಮಾರ್ಗದ ನಡುವೆ ಮೆಟ್ರೋ ಸಂಚಾರವಾಗಲಿದೆ. ಕಾಮಗಾರಿ ಮುಗಿದು ಇದೀಗ ಮೆಟ್ರೋ ವಾಣಿಜ್ಯ ಸಂಚಾರ ಆರಂಭಕ್ಕೆ ಅನುಮತಿ ಸಿಕ್ಕಿದೆ. ಆಗಸ್ಟ್ ,29 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ಧೀಪ್ ಸಿಂಗ್ ಪುರಿ ಚಾಲನೆ ನೀಡಲಿದ್ದಾರೆ.
ಆಗಸ್ಟ್ 11 ಹಾಗೂ 12 ರಂದು ರೈಲ್ವೆ ಸುರಕ್ಷತಾ ತಂಡ, ಮೈಸೂರು ರಸ್ತೆ – ಕೆಂಗೇರಿ ಮಾರ್ಗದ ಪರಿಶೀಲನೆ ನಡೆಸಿ, ಸಂಚಾರಕ್ಕೆ ಅನುಮತಿ ನೀಡಿತ್ತು. ನಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೂಚನೆ ಮೇರೆಗೆ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದರು. ಒಟ್ಟು 7.53 ಕೀ ಮೀಟರ್ ಉದ್ದದ ಇರುವ ಮೈಸೂರು ರಸ್ತೆಯಿಂದ ಕೆಂಗೇರಿ ಮೆಟ್ರೋ ಮಾರ್ಗವನ್ನು ಸುಮಾರು, 1560 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಬಿ.ಎಂ.ಆರ್.ಸಿ.ಎಲ್ ಕಳೆದ ಮೂರು ತಿಂಗಳಿಂದ ಟ್ರಯಲ್ ರನ್ ರೈಲು ಓಡಿಸುತ್ತಿತ್ತು.
ಈ ಮೆಟ್ರೋ ಮಾರ್ಗದಲ್ಲಿ ಪ್ರತಿನಿತ್ಯ 75 ರಿಂದ 80 ಸಾವಿರ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ. ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಮಾರ್ಗದಲ್ಲಿ, ನಾಯಂಡಹಳ್ಳಿ, ರಾಜರಾಜೇಶ್ವರಿ ನಗರ, ಬೆಂಗಳೂರು ವಿವಿ, ಆರ್ ವಿ ಕಾಲೇಜು, ಕೆಂಗೇರಿ ಬಸ್ ಡಿಪೋ, ಕೆಂಗೇರಿ ಸೇರಿ ಒಟ್ಟು 6 ನಿಲ್ದಾಣಗಳು ಇದ್ದು, ಈ ಭಾಗದ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಇದೆ.