ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ

 ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ಎರಡು ದಿನ ಭಾರೀ ಮಳೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಎರಡು ದಿನಗಳು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಮುಂದಿನ 48 ಗಂಟೆಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ.

ಅರಬ್ಬಿ ಸಮುದ್ರದ ಪೂರ್ವ ಮಧ್ಯಭಾಗದಲ್ಲಿ ಪ್ರಬಲ ವಾಯುಭಾರ ಕುಸಿತ ಉಂಟಾಗಿದೆ. ಇದರಿಂದಾಗಿ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇಂದು-ನಾಳೆ ಗುಡುಗು, ಸಿಡಿಲಿನ ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.

ಕರ್ನಾಟಕದಲ್ಲಿ ಸುರಿಯುತ್ತಿರುವ ಮಳೆಗೆ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಕರಾವಳಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯೂ ಕಾರಣವಾಗಿದೆ. ಬೆಂಗಳೂರು ಸೇರಿದಂತೆ ಇಂದು ಕೋಲಾರ, ಚಿಕ್ಕಬಳ್ಳಾಪು, ತುಮಕೂರು ಜಿಲ್ಲೆಗಳಲ್ಲಿ ಬೆಳಿಗ್ಗೆಯಿಂದ ಜಿಟಿ-ಜಿಟಿ ಮಳೆಯಾಗುತ್ತಿದೆ.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ.
ಕರಾವಳಿ ಜಿಲ್ಲೆಗಳಲ್ಲಿ ಗುಡುಗು, ಸಿಡಿಲಿನ ಆರ್ಭಟ ಇರಲಿದ್ದು, ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನಲ್ಲಿ ಮಳೆ ತಗ್ಗಿದ್ದು, ಒಣಹವೆ ಮುಂದುವರೆಯಲಿದೆ. ಎರಡು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡಕೆ ಮತ್ತು ಭತ್ತ, ರಾಗಿ ಸೇರಿ ತರಕಾರಿ ಬೆಳೆಗೆ ಹಾನಿಯಾಗುವ ಆತಂಕ ಎದುರಾಗಿದೆ.