ಅಫ್ಘಾನಿಸ್ತಾನದಲ್ಲಿನ 20 ವರ್ಷಗಳ ಸುದೀರ್ಘ ಯುದ್ಧಕ್ಕೆ ತೆರೆ: ಕಾಬೂಲ್ ನಿಂದ ಸ್ವದೇಶಕ್ಕೆ ತೆರಳಿದ ಅಮೆರಿಕಾ ಸೇನಾ ಪಡೆ

 ಅಫ್ಘಾನಿಸ್ತಾನದಲ್ಲಿನ 20 ವರ್ಷಗಳ ಸುದೀರ್ಘ ಯುದ್ಧಕ್ಕೆ ತೆರೆ: ಕಾಬೂಲ್ ನಿಂದ ಸ್ವದೇಶಕ್ಕೆ ತೆರಳಿದ ಅಮೆರಿಕಾ ಸೇನಾ ಪಡೆ

ಕಾಬೂಲ್: ಅಫ್ಘಾನಿಸ್ತಾನದಲ್ಲಿನ 20 ವರ್ಷಗಳ ಸುದೀರ್ಘ ಯುದ್ಧಕ್ಕೆ ಕೊನೆಗೂ ಅಧಿಕೃತ ತೆರೆ ಬಿದ್ದಿದೆ. ಅಮೆರಿಕದ ಕೊನೆಯ ಸೇನಾ ತುಕಡಿಗಳು ಕಾಬೂಲಿನಿಂದ ಸ್ವದೇಶಕ್ಕೆ ವಾಪಸ್ ಆಗುವುದರೊಂದಿಗೆ, ಎರಡು ದಶಕಗಳ ಹೋರಾಟ ಕೊನೆಗೊಂಡಿದೆ. ಅಫ್ಘಾನಿಸ್ಥಾನದಿಂದ ಅಮೆರಿಕ ಸೈನಿಕರ ಸ್ಥಳಾಂತರ ಕಾರ್ಯಾಚರಣೆ ಪೂರ್ತಿಗೊಂಡಿದ್ದು, ಕೊನೆಗೂ ವಿಶ್ವದ ದೊಡ್ಡಣ್ಣ ತನ್ನ ಸೋಲೋಪ್ಪಿಕೊಂಡು, ಸುದೀರ್ಘ ಯುದ್ಧಕ್ಕೆ ತೆರೆ ಎಳೆದಿದೆ.

2001ರಲ್ಲಿ ಅಮೆರಿಕದ ಅವಳಿ ಕಟ್ಟಡದ ಮೇಲೆ ಒಸಾಮಾ ಬಿನ್ ಲಾಡೆನ್ ನೇತೃತ್ವದ ಅಲ್ ಖೈದಾ ಉಗ್ರ ಸಂಘಟನೆ ದಾಳಿ ನಡೆಸಿ, ಸಾವಿರಾರು ಜನರ ಸಾವಿಗೆ ಕಾರಣಾರಾದರು. ಅಲ್ ಖೈದಾ ಉಗ್ರರಿಗೆ ಅಂದು ಅಫ್ಘಾನಿಸ್ತಾನಿದಲ್ಲಿ ಅಧಿಕಾರದಲ್ಲಿದ್ದ ತಾಲಿಬಾನ್ ಸರ್ಕಾರ ಅಶ್ರಯ ನೀಡಿತ್ತು. ಉಗ್ರ ಸಂಘಟನೆಗಳ ಮೇಲೆ ಯುದ್ಧ ಸಾರಿದ್ದ ಅಮೆರಿಕ ಸೇನೆ ಅಫ್ಘಾನಿಸ್ತಾನ ಪ್ರವೇಶಿಸಿತ್ತು.

ಅಮೆರಿಕಾ ನೇತೃತ್ವದ ನ್ಯಾಟೋ ಸೇನಾ ಪಡೆಗಳು ತಾಲಿಬಾನ್ ವಿರುದ್ಧ ಹೋರಾಡಿ, ಅವರನ್ನು ಅಧಿಕಾರದಿಂದ ಕೊತ್ತೊಗೆದವು. ನಂತರ ತನಗೆ ಬೇಕಾದ ಆಫ್ಘನ್ ನಾಯಕರನ್ನು ಒಳಗೊಂಡ ಪ್ರಜಾಪ್ರಭುತ್ವದ ಸರ್ಕಾರವನ್ನು ಪ್ರತಿಷ್ಟಾಪನೆ ಮಾಡಿತ್ತು. ಹಲವು ವರ್ಷಗಳ ಯುದ್ಧದ ನಂತರ ಪಾಕಿಸ್ತಾನದಲ್ಲಿ ಅಡಗಿದ್ದ ಒಸಾಮಾ ಬಿನ್ ಲಾಡೆನ್ ನ್ನು ಅಮರಿಕಾ ಪಡೆಗಳು ಕೊಂದು ಹಾಕಿದವು. ಆದರೆ ಸಂಪೂರ್ಣವಾಗಿ ತಾನಿಬಾನ್ ನ್ನು ಸೋಲಿಸಲು ವಿಫಲವಾದ ಅಮೆರಿಕಾ ಕೊನೆ ಅವರೊಂದಿಗೆ ಸಂಧಾನ ನಡೆಸಿ, ಅಫ್ಘಾನ್ ತೊರೆಯುವುದಾಗಿ ಭರವಸೆ ನೀಡಿತು. ಅಮೆರಿಕಾ ಸೇನೆ ಹಿಂತೆಗೆತ ಆರಂಭವಾದ ಬೆನ್ನಲ್ಲೇ ತಾಲಿಬಾನಿಗಳು ಮತ್ತೆ ಅಫ್ಘಾನಿಸ್ತಾನದಲ್ಲಿನ ಸೇನೆಯನ್ನು ಸೋಲಿಸಿ, ಅಮೆರಿಕಾ ಬೆಂಬಲಿತ ಸರ್ಕಾರವನ್ನು ಕಿತ್ತೊಗೆದು, ಇಡೀ ದೇಶವನ್ನು ಸಂಪೂರ್ಣವಾಗಿ ತನ್ನ ವಶಕ್ಕೆ ತೆಗೆದುಕೊಂಡಿದೆ.

ಎರಡು ದಶಕಗಳ ಈ ಭೀಕರ ಕಾಳಗದಲ್ಲಿ ಅಫ್ಘಾನ್ ನಾಗರಿಕರು, ಅಮೆರಿಕಾ ಸೈನಿಕರು, ಉಗ್ರರು ಸೇರಿ ಒಂದುವರೆ ಲಕ್ಷಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಯುದ್ಧಕ್ಕಾಗಿ ಅಮೆರಿಕಾ ಲಕ್ಷಾಂತರ ಕೋಟಿ ಹಣ ಖರ್ಚು ಮಾಡಿದೆ. ಅಮೆರಿಕಾ ಸೇನಾ ಪಡೆಗಳು ವಾಪಾಸ್ ಆದ ಬೆನ್ನಲ್ಲೇ ತಾಲಿಬಾನ್ ಸ್ವಾತಂತ್ರ್ಯ ಘೋಷಿಸಿಕೊಂಡಿದ್ದು, ಕಾಬೂಲ್ ನಲ್ಲಿ ಸಂಭ್ರಚಾರಣೆ ನಡೆಸಿದೆ.