ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಫೋಟೋ ಹಂಚಿಕೊಂಡ ರಾಹುಲ್​ ಗಾಂಧಿ ವಿರುದ್ಧ ದೂರು

 ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಫೋಟೋ ಹಂಚಿಕೊಂಡ ರಾಹುಲ್​ ಗಾಂಧಿ ವಿರುದ್ಧ ದೂರು

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಅತ್ಯಾಚಾರಕ್ಕೆ ಒಳಾಗದ ಬಾಲಕಿಯ ಕುಟುಂಬಸ್ಥರನ್ನು ರಾಹುಲ್​ ಗಾಂಧಿ ಭೇಟಿ ಮಾಡಿದ್ದರು.ದೆಹಲಿಯಲ್ಲಿ ಅತ್ಯಾಚಾರಕ್ಕೆ ಒಳಗಾದ 9 ವರ್ಷದ ಬಾಲಕಿಯ ಪೋಷಕರ ಫೋಟೋವನ್ನು ಹಂಚಿಕೊಂಡು ಸಂತ್ರಸ್ತೆಯ ಕುರಿತ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ ಎಂಬ ಆರೋಪದ ಮೇಲೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧ ದೆಹಲಿಯ ವಕೀಲ ವಿನೀತ್​ ಜಿಂದಾಲ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಹುಲ್​ ಗಾಂಧಿ ಅವರ ಈ ವರ್ತನೆ ಅಪರಾಧವಾಗಿದೆ. ಅಲ್ಲದೇ ಪೋಕ್ಸೊ ಕಾಯ್ದೆ ಸೆಕ್ಷನ್​ 23, ಬಾಲ ನ್ಯಾಯ 74, 228ಎ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಅಪರಾಧವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂತ್ರಸ್ತ ಕುಟುಂಬದ ಮಾಹಿತಿ ಬಿಟ್ಟುಕೊಟ್ಟ ಹಿನ್ನಲೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್​ಸಿಪಿಸಿಆರ್​) ಕೂಡ ಮಂಗಳವಾರ ಟ್ವಿಟರ್​ ಇಂಡಿಯಾಗೆ ನೋಟಿಸ್​ ಜಾರಿ ಮಾಡಿತ್ತು. ಅಲ್ಲದೇ ಪೋಕ್ಸೊ ಕಾಯ್ದೆಯನ್ನು ಉಲ್ಲಂಘಿಸಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರು ಟ್ವಿಟ್​ ಮಾಡಿದ್ದು, ಅವರ ವಿರುದ್ಧ ಕ್ರಮ ಕೈ ಗೊಳ್ಳುವಂತಎ ಎನ್​ಸಿಪಿಸಿಆರ್​ ಟ್ವಿಟರ್​ ಇಂಡಿಯಾಕ್ಕೆ ತಿಳಿಸಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ರಾಹುಲ್​ ಗಾಂಧಿ ವಿರುದ್ಧ ದೂರು ದಾಖಲಾಗಿದೆ.

ಈ ಪ್ರಕರಣ ಕುರಿತು ಟ್ವೀಟ್​ ಮಾಡಿರುವ ಎನ್‌ಸಿಪಿಸಿಆರ್‌ನ ಅಧ್ಯಕ್ಷೆ ಪ್ರಿಯಾಂಕ್ ಕನೂಂಗೊ, ಈ ಕುರಿತು ಅರಿವಿಗೆ ಬರುತ್ತಿದ್ದಂತೆ ಮಕ್ಕಳ ಹಕ್ಕುಗಳ ಸಂಸ್ಥೆಯು ಕ್ರಮ ಕೈ ಗೊಂಡಿದೆ, ಸಂತ್ರಸ್ತೆ ಪೋಷಕರ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ರಾಹುಲ್​ ಗಾಂಧಿ ನಿಯಮ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಪಶ್ಚಿಮ ದೆಹಲಿಯಲ್ಲಿ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಮತ್ತು ಧಾರ್ಮಿಕ ಕ್ಷೇತ್ರದಲ್ಲಿದ್ದ ವ್ಯಕ್ತಿ 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದರು. ಈ ಘಟನೆ ಕುರಿತು ಪೊಲೀಸರು ಸೆಕ್ಷನ್​ 302, 376, 506 ಅಡಿ ಮತ್ತು ಪೋಸ್ಕೊ, ಎಸ್​ ಸಿ/ ಎಸ್​ ಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು.