ಅಡುಗೆ ಭಟ್ಟರ ತೋಟದಲ್ಲಿ ಗುಲಾಬಿ ಘಮಲು; ಒಂದೇ ಗ್ರಾಮದ 7 ರೈತರ ಹೊಸ ಬದುಕಿಗೆ ನೆರವಾದ ನರೇಗಾ ಯೋಜನೆ!

ಕೋಲಾರ: ಅಡುಗೆ ಭಟ್ಟರಾಗಿ ಕೆಲಸ ಮಾಡುತ್ತಿದ್ದವರು, ನರೇಗಾ ಯೋಜನೆಯಡಿ ಧನಸಹಾಯ ಪಡೆದು ಗುಲಾಬಿ ಬೆಳೆದು ಈಗ ಮಾದರಿ ರೈತರೆನಿಸಿಕೊಂಡಿದ್ದಾರೆ. ಮಾಲೂರು ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿಯ ಕೊಂಡ್ರಹಳ್ಳಿ ಒಂದೇ ಗ್ರಾಮದಲ್ಲಿ 7 ಜನ ಕೃಷಿಕರು ನರೇಗಾದಡಿ ಗುಲಾಬಿ ಬೆಳೆದು ಬದುಕು ಕಟ್ಟಿಕೊಂಡಿದ್ದಾರೆ.
ಕೊಂಡ್ರಹಳ್ಳಿ ಗ್ರಾಮ ಈ ಹಿಂದೆ ಅಡುಗೆ ಭಟ್ಟರಿಗೆ ತಾಲೂಕಿನಾದ್ಯಂತ ಪ್ರಸಿದ್ಧಿಯಾಗಿತ್ತು. ತಾಲ್ಲೂಕಿನಲ್ಲಿ ಎಲ್ಲೇ ಮದುವೆ ಸೇರಿದಂತೆ ಯಾವುದೇ ಸಮಾರಂಭ ಇದ್ದರೂ, ಇಲ್ಲಿನ ಈ ಗ್ರಾಮದ ಭಟ್ಟರು ಇರುತ್ತಿದ್ದರು. ಇಲ್ಲಿನ 80 ಕುಟುಂಬಗಳಲ್ಲಿ ಬಹುತೇಕರು ಅಡುಗೆ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ಈಗ ಈ ಅಡುಗೆ ಭಟ್ಟರ ತೋಟಗಳಲ್ಲಿ ಗುಲಾಬಿ ಹೂವಿನ ಘಮಲು ಪಸರಿಸಿದ್ದು, ತಾಲ್ಲೂಕಿನಲ್ಲೇ ಹೆಚ್ಚು ಗುಲಾಬಿ ಹೂ ಬೆಳೆಯುತ್ತಿದ್ದಾರೆ. ಗ್ರಾಮದ ರೈತರಾದ ಕೆ.ಬಿ ಮಹೇಶ್, ಶಿವಕುಮಾರ್, ಶಿವರಾಜು, ಕೆ.ಎಸ್ ಮಲ್ಲಿಕಾರ್ಜುನಯ್ಯ, ನಟರಾಜ್, ಶಿವಶಂಕರಯ್ಯ, ವಿಜಯ್ ಕುಮಾರ್ ಎಂಬುವರು ಉದ್ಯೋಗ ಖಾತ್ರಿಯಡಿ ಗುಲಾಬಿ ಬೆಳೆದು ಆದಾಯ ಖಾತರಿ ಮಾಡಿಕೊಂಡಿದ್ದಾರೆ.

ಗ್ರಾಮದಲ್ಲಿ ಈ ಹಿಂದೆ ಹೆಚ್ಚಾಗಿ ತರಕಾರಿ ಬೆಳೆ ಬೆಳೆಯುತ್ತಿದ್ದರು. ಆದರೆ ತರಕಾರಿ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸರಿಯಾಗಿ ಬೆಲೆ ಸಿಗದೆ, ನಷ್ಟಕ್ಕೆ ಗುರಿಯಾಗಿದ್ದರು. ಹೀಗಾಗಿ ನಿಶ್ಚಿತ ಹಾಗೂ ನಿರಂತರ ಆದಾಯ ಸಿಗುವಂತಹ ಹೂ ಬೆಳೆಗಳನ್ನು ಬೆಳೆಯಲು ನಿರ್ಧರಿಸಿದರು. ಗುಲಾಬಿ ಹೂ ಬೆಳೆಯಲ ನಿರ್ಧರಿಸಿದ್ದ ರೈತರಿಗೆ, ಮೊದಲಿಗೆ ಹಣಕಾಸಿನ ಕೊರತೆ ಎದುರಾಗಿತ್ತು. ಆದರೆ ರೈತರ ಗುಲಾಬಿ ಕೃಷಿಯ ಕನಸಿಗೆ ರೆಕ್ಕೆ ಜೋಡಿಸಿದ್ದು, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ. ಕಳೆದ ವರ್ಷ ರೈತ ಕ್ರಿಯಾ ಅಭಿಯಾನದ ಪ್ರಚಾರ ವೇಳೆ ನರೇಗಾ ಅಡಿಯಲ್ಲಿ ಗುಲಾಬಿ ಹೂ ಬೆಳೆಯಲು ನೆರವು ದೊರೆಯುತ್ತದೆ ಎಂಬ ಮಾಹಿತಿ ಪಡೆದಕೊಂಡರು. ನಂತರ ನೇರವಾಗಿ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಗುಲಾಬಿ ಹೂ ಬೆಳೆಯಲು ಅರ್ಜಿ ಸಲ್ಲಿಸಿದರು. ಅಗತ್ಯ ದಾಖಲೆಗಳನ್ನು ಪರಿಶೀಲಿಸಿದ ಯೋಜನೆ ಅನುಷ್ಠಾನಕ್ಕೆ ಅನುಮೋದನೆ ನೀಡಿದರು. ಸದಾ ಕಾಲ ಹೂ ಸಿಗುವ, ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯುಳ್ಳ ಮೆರಾಬುಲ್ ತಳಿಯ ಹೂ ಗಿಡಗಳನ್ನು ನಾಟಿ ಮಾಡಿದ್ದಾರೆ.

ಸದ್ಯ ಏಳು ಕೃಷಿಕರ ತೋಟಗಳಲ್ಲಿ ಹೂಗಳು ಬಿಟ್ಟಿದ್ದು, ನಿತ್ಯ ಮಾಲೂರು, ಹೊಸಕೋಟೆ, ಹಾಗೂ ಬೆಂಗಳೂರು ಮಾರುಕಟ್ಟೆಗಳಿಗೆ ಕಳುಹಿಸಲಾಗುತ್ತಿದೆ. ಪ್ರತಿನಿತ್ಯ 50 ರಿಂದ 8೦ ಕೆ.ಜಿಯಷ್ಟು ಹೂಗಳು ಸಿಗುತ್ತಿದೆ. ಕೆಲವೊಂದು ತಿಂಗಳು ಬಿಟ್ಟು, ವರ್ಷ ಕಾಲ ಹೂವಿಗೆ ಬೇಡಿಕೆ ಇದ್ದು, ಹಬ್ಬದ ದಿನಗಳಲ್ಲಿ ಹೂವಿನ ಬೆಲೆ ಗಗನಕ್ಕೇರುತ್ತದೆ. ಬೇಡಿಕೆ ಇಲ್ಲದಿದ್ದ ದಿನಗಳಲ್ಲಿ ಕೆ.ಜಿ 2೦ಕ್ಕೆ ಮಾರಾಟವಾದರೆ, ಹಬ್ಬಗಳ ದಿನಗಳಲ್ಲಿ 2೦೦ರಿಂದ 3೦೦ಕ್ಕೂ ಸಹ ಕೆ.ಜಿ ಮಾರಾಟವಾಗುತ್ತದೆ. ಎಲ್ಲಾ ಕುಟುಂಬಗಳು ತಿಂಗಳಿಗೆ ಒಂದು ಎಕರೆಯಲ್ಲಿ ಸರಾಸರಿ 35 ರಿಂದ 5೦ ಸಾವಿರ (ಗೊಬ್ಬರ, ಔಷಧಿ, ಹಾಗೂ ಕೂಲಿ ಕಳೆದು) ಆದಾಯ ಗಳಿಸುತ್ತಿದ್ದಾರೆ.
ಗುಲಾಬಿ ಬೆಳೆದು ನಿರಂತರ ಆದಾಯ ಗಳಿಸುತ್ತಿರುವ ಈ ಕುಟುಂಬಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು, ಉತ್ತಮ ಜೀವನ ನಡೆಸುತ್ತಿದ್ದಾರೆ. ಇದರೊಂದಿಗೆ ಗ್ರಾಮದಲ್ಲಿ (419 * 7=2884) 2884 ಮಾನವ ದಿನಗಳ ಸೃಷ್ಟಿಸಿಲಾಗಿದೆ. ಇನ್ನೂ ನಿತ್ಯ ಹೂ ಕಟಾವು ಮಾಡುವುದರಿಂದ ಗ್ರಾಮದಲ್ಲಿ ಹಲವು ಮಹಿಳೆಯರಿಗೆ ಉದ್ಯೋಗ ಸಹ ದೊರೆಯುತ್ತಿದೆ. ಗುಲಾಬಿ ಬೆಳೆದ ಕೆಲ ಅಡುಗೆ ಭಟ್ಟರು ಈಗ ತಮ್ಮ ವೃತ್ತಿಯನ್ನು ಬಿಟ್ಟು, ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದಾರೆ. ಈ ಮೂಲಕ ಇತರೆ ರೈತರಿಗೂ ಮಾದರಿಯಾಗಿದ್ದಾರೆ.
ನರೇಗಾ ಯೋಜನಯಡಿ ಒಂದು ಎಕರೆಗೆ ಎರಡು ಲಕ್ಷ ನೆರವು
ಹಾಲು, ರೇಷ್ಮೆ ಹಾಗೂ ತರಕಾರಿಗೆ ಪ್ರಸಿದ್ಧವಾಗಿರುವ ಕೋಲಾರ ಜಿಲ್ಲೆಯಲ್ಲಿ, ಈಗ ಪುಷ್ಪೋಧ್ಯಮ ಸಹ ಬೆಳೆಯುತ್ತಿದೆ. ಜಿಲ್ಲೆಯಲ್ಲಿ, ಅದರಲ್ಲೂ ಮಾಲೂರು ತಾಲ್ಲೂಕಿನಲ್ಲಿ ಹೂ ಬೆಳೆಗಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದಕ್ಕೆ ಉದ್ಯೋಗ ಖಾತರಿ ಯೋಜನೆಯು ಸಹಾಯಕವಾಗಿದೆ. ನರೇಗಾ ಯೋಜನೆಯಡಿಯಲ್ಲಿ ತಾಲ್ಲೂಕಿನಲ್ಲಿ ಕಳೆದ 2020-21ನೇ ಸಾಲಿನಲ್ಲಿ ಹೊಸದಾಗಿ 22 ಎಕರೆಯಲ್ಲಿ ಗುಲಾಬಿ ವಿಸ್ತರಣೆಯಾಗಿದ್ದು, 2021-22ನೇ ಸಾಲಿನಲ್ಲಿ 5೦ ಎಕರೆ ಪ್ರದೇಶದಲ್ಲಿ ಗುಲಾಬಿ ವಿಸ್ತರಣೆ ಮಾಡಲಾಗಿದೆ. ನರೇಗಾ ಯೋಜನೆಯಡಿ ಒಂದು ಎಕರೆಗೆ 2 ಲಕ್ಷದವರೆಗೂ ಆರ್ಥಿಕ ನೆರವು ದೊರೆಯುತ್ತದೆ.
ಆನಂದ್ ಸಿ, ಐಇಸಿ ಸಂಯೋಜನಕರು, ಮಾಲೂರು